ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಪಂಜಾಬ್‌ನ ಪಿಂಡಿ ಭಟ್ಟಿಯಾನ್ ಪ್ರದೇಶದ ಸಮೀಪ ಇಂದು (ಭಾನುವಾರ) ಮುಂಜಾನೆ ಭಾರಿ ದುರಂತ ಸಂಭವಿಸಿದೆ. ಫೈಸಲಾಬಾದ್ ಮೋಟರ್‌ವೇಯಲ್ಲಿ ಸಂಚರಿಸುತ್ತಿದ್ದ ಬಸ್‌ಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು, 16 ಜನರು ಸಾವನ್ನಪ್ಪಿ, 11 ಮಂದಿ ಗಾಯಗೊಂಡರು ಎಂದು ಪಾಕ್ ಮೂಲದ ಸುದ್ದಿಸಂಸ್ಥೆಯೊಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. 35 ರಿಂದ 40 ಪ್ರಯಾಣಿಕರಿದ್ದ ಬಸ್ ಕರಾಚಿಯಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿತ್ತು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧಿಕಾರಿ ಫಹಾದ್ ನೀಡಿದ ಮಾಹಿತಿ ಪ್ರಕಾರ, ಡೀಸೆಲ್ ಡ್ರಮ್‌ಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್‌ಗೆ ಬಸ್ ಡಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಎರಡೂ ವಾಹನಗಳ ಚಾಲಕರು ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಅಲ್ಲೇ ಹತ್ತಿರದಲ್ಲಿದ್ದ ಜನರು ಬಸ್ಸಿನ ಕಿಟಕಿಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.
ಆಗಸ್ಟ್ 14ರಂದು ಪಾಕಿಸ್ತಾನವು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯಲ್ಲಿದ್ದಾಗ ಪಂಜಾಬ್ ಪ್ರಾಂತ್ಯವು ಭಾರಿ ಸಂಖ್ಯೆಯ ರಸ್ತೆ ಅಪಘಾತಗಳಿಗೆ ಸಾಕ್ಷಿಯಾಗಿತ್ತು. 17 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದು, 1,773 ಜನ ಗಾಯಗೊಂಡಿದ್ದರು. ಇದರಲ್ಲಿ 1,659 ಮಂದಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡಿದ್ದರು ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಇದನ್ನೂ ಓದಿ : Watch: ನಿಂತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದ ಸಾರಿಗೆ ಬಸ್.. ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ: ವಿಡಿಯೋ
ತುರ್ತು ಸೇವಾ ಇಲಾಖೆ ಸಂಗ್ರಹಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಆಗಸ್ಟ್ 13 ರಂದು ಪ್ರಾಂತ್ಯದಾದ್ಯಂತ ವರದಿಯಾದ 1,234 ರಸ್ತೆ ಅಪಘಾತಗಳಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 1,338 ಇತರರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಹಾಗೆಯೇ, ಲಾಹೋರ್ನಲ್ಲಿ ಸಹ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿ ಮಾಡಲಾಗಿದೆ. ಆಗಸ್ಟ್ 14 ರಂದು ಲಾಹೋರ್‌ನ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ರೋಗಿಗಳಿಂದ ತುಂಬಿ ತುಳುಕುತ್ತಿದ್ದವು.
ಇದನ್ನೂ ಓದಿ : 40 ಮಂದಿ ಪ್ರಯಾಣಿಸುತ್ತಿದ್ದ ಆರ್‌ಟಿಸಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ : ಮುಂದಾಗಿದ್ದೇನು?
ರಿಕ್ಷಾಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್: ರಸ್ತೆ ಬದಿ ನಿಂತಿದ್ದ ಆಟೋ ರಿಕ್ಷಾಕ್ಕೆ ವೇಗವಾಗಿ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಭವಿಸಿತ್ತು. ಇರುಮುಡಿ ಮೂರ್ತಿ (54) ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಬೆಂಗಳೂರಿಂದ ಹಾಸನಕ್ಕೆ ಬಸ್ ಬರುತ್ತಿದ್ದಾಗ ದುರಂತ ಸಂಭವಿಸಿತ್ತು.
ಇದನ್ನೂ ಓದಿ : ಬಸ್‌ಗೆ ಗುದ್ದಿದ ಗ್ಯಾಸ್ ಟ್ಯಾಂಕರ್ಗೆ ಬಿತ್ತು ಬೆಂಕಿ: ಇತರ ಮೂರು ಬಸ್ಗಳಿಗೂ ಹಬ್ಬಿದ ಅಗ್ನಿ