ಜಿನೀವಾ: ಎರಡನೇ ಪ್ರಪಂಚ ಯುದ್ಧದ ಬಳಿಕ ಯುರೋಪ್ನಲ್ಲಿ ಅತಿದೊಡ್ಡ ವಲಸೆ ಬಿಕ್ಕಟ್ಟನ್ನು ಎದುರಿಸಲು ರಷ್ಯಾ-ಉಕ್ರೇನ್ ಯುದ್ಧ ಕಾರಣವಾಗಿದೆ. ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನಿಯನ್ನರು ಲಕ್ಷಾಂತರ ಸಂಖ್ಯೆಯಲ್ಲಿ ದೇಶ ತೊರೆದಿದ್ದಾರೆ. ಹೀಗೆ ವಲಸೆ ಹೋದವರ ಸಂಖ್ಯೆ 4 ಮಿಲಿಯನ್ಗೂ (40 ಲಕ್ಷ) ಅಧಿಕ ಎಂದು ಅಂದಾಜಿಸಲಾಗಿದೆ. ಇದು ಈವರೆಗಿನ ಅತ್ಯಧಿಕ ವಲಸೆ ಎಂದು ವಿಶ್ವಸಂಸ್ಥೆ ಹೇಳಿದೆ.
ಈ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಾದ ಯುಎನ್ಎಚ್ಸಿಆರ್ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಷ್ಯಾ- ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಈವರೆಗೂ 40 ಲಕ್ಷಕ್ಕೂ ಅಧಿಕ ಜನರು ಉಕ್ರೇನ್ ತೊರೆದು ವಿವಿಧ ದೇಶಗಳಿಗೆ ಹೋಗಿದ್ದಾರೆ. ಇದರಲ್ಲಿ ಪೊಲೆಂಡ್ಗೆ 2.3 ಮಿಲಿಯನ್(2 ಲಕ್ಷಕ್ಕೂ ಅಧಿಕ), 6.8 ಮಿಲಿಯನ್ ರೊಮೇನಿಯಾಗೆ, 3.8 ಮಿಲಿಯನ್ ಜನರ ಮಾಲ್ಡೋವಾಗೆ, 3.6 ಮಿಲಿಯನ್ ಜನ ಹಂಗೇರಿಗೆ ತೆರಳಿದ್ದಾರೆ ಎಂದು ಹೇಳಿದೆ.
ಇವೆಲ್ಲವೂ ಸರ್ಕಾರಿ ಅಂಕಿ ಅಂಶಗಳು. ಇದಲ್ಲದೇ, ಇನ್ನಷ್ಟು ಜನರು ದೇಶ ತೊರೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ರಷ್ಯಾ ದಾಳಿ ಶುರು ಮಾಡಿ 34 ದಿನಗಳು ಕಳೆದಿದ್ದು, ವಿದೇಶಿಯರು ಮತ್ತು ಉಕ್ರೇನಿಯನ್ನರು ಸೇರಿ 6 ಮಿಲಿಯನ್ ಅಂದರೆ 60 ಲಕ್ಷ ಜನರು ದೇಶ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹೇಳಿದೆ.
ಪುಟಿನ್ ವಿರುದ್ಧ ಟ್ರಂಪ್ ಟೀಕೆ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಸ್ತಕ್ಷೇಪ ಮಾಡಿ ಜೋ ಬೈಡನ್ ಗೆಲುವು ಪಡೆಯಲು ನೆರವು ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿರುವ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್, ಪುಟಿನ್ ಈಗ ರಷ್ಯಾ ದೇಶದ ಅಭಿಮಾನಿಯಾಗಿ ಉಳಿದಿಲ್ಲ. ಅವರ ಹಿತಾಸಕ್ತಿಗಾಗಿ ದೇಶವನ್ನೇ ಪಣಕ್ಕಿಟ್ಟಿದ್ದಾರೆ. ಅಲ್ಲದೇ, ಅಮೆರಿಕ ಚುನಾವಣೆಯ ವೇಳೆ ಬೈಡನ್ಗೆ 3.5 ಮಿಲಿಯನ್ ಡಾಲರ್ ಹಣವನ್ನು ಏಕೆ ನೀಡಿದ್ದರು ಎಂಬುದನ್ನು ತಿಳಿಸಬೇಕು. ಈ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಅದನ್ನು ನಾನು ಕೇಳಬಯಸುತ್ತೇನೆ ಎಂದಿದ್ದಾರೆ.
ಸಂಧಾನ ಯಶ, ಅಣ್ವಸ್ತ್ರ ಬಳಸಲ್ಲ: ಈ ಮಧ್ಯೆಯೇ ಟರ್ಕಿ ದೇಶದ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಧಾನಕಾರರ ಮಧ್ಯೆ ಮಾತುಕತೆ ನಡೆದಿದ್ದು, ರಷ್ಯಾ ತನ್ನ ದಾಳಿಯನ್ನು ಕೀವ್ ಮತ್ತು ಚೆರ್ನಿಹಿವ್ ನಗರಗಳ ಮೇಲೆ ಕಡಿತಗೊಳಿಸಲು ಒಪ್ಪಿಗೆ ಸೂಚಿಸಿದೆ. ಇದು ಉಭಯ ದೇಶಗಳ ಮಧ್ಯೆ ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಕೊನೆಗೊಳ್ಳುವ ಮೊದಲ ಹಂತ ಎನ್ನಲಾಗಿದೆ. ಅಲ್ಲದೇ, ತನ್ನಲ್ಲಿರುವ ಪರಮಾಣುಗಳನ್ನು ದೇಶದ ಭದ್ರತೆಗೆ ಬೆದರಿಕೆ ಬಂದರೆ ಮಾತ್ರ ಬಳಸಲಾಗುವುದು ಎಂದು ಹೇಳುವ ಮೂಲಕ ಅಣ್ವಸ್ತ್ರ ದಾಳಿಯನ್ನು ರಷ್ಯಾ ತಳ್ಳಿ ಹಾಕಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿ ಗಿಫ್ಟ್: ಸಿಬ್ಬಂದಿ, ಪಿಂಚಣಿದಾರರಿಗೂ ತುಟ್ಟಿ ಭತ್ಯೆ ಏರಿಕೆ