ಸಿಯೋಲ್ (ದಕ್ಷಿಣ ಕೊರಿಯಾ) : ಜೆಜು ದ್ವೀಪದ ದಕ್ಷಿಣದ ಸಮುದ್ರದಲ್ಲಿ ಯುಎಸ್ ವಿಮಾನವಾಹಕ ನೌಕೆಯು ದಕ್ಷಿಣ ಕೊರಿಯಾದೊಂದಿಗೆ ಜಂಟಿ ಸಮರಾಭ್ಯಾಸವನ್ನು ನಡೆಸುವ ಕೆಲವೇ ಹೊತ್ತಿಗೆ ಮುಂಚೆ, ಉತ್ತರ ಕೊರಿಯಾ ಸೋಮವಾರ ಪೂರ್ವ ಸಮುದ್ರದ ಕಡೆಗೆ ಎರಡು ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (SRBMs) ಹಾರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಹ್ವಾಂಗೇ ಪ್ರಾಂತ್ಯದ ಚುಂಗ್ವಾ ಕೌಂಟಿ ಪ್ರದೇಶದಿಂದ ಬೆಳಗ್ಗೆ 7:47 ರಿಂದ 8 ಗಂಟೆಯ (ಸ್ಥಳೀಯ ಸಮಯ) ನಡುವೆ ಕ್ಷಿಪಣಿ ಉಡಾವಣೆಯಾಗಿದ್ದನ್ನು ಪತ್ತೆ ಮಾಡಿರುವುದಾಗಿ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ (ಜೆಎಸ್‌ಸಿ) ಹೇಳಿದೆ.
ಕ್ಷಿಪಣಿಗಳು 370 ಕಿಮೀ ದೂರ ಕ್ರಮಿಸಿ ಸಮುದ್ರಕ್ಕೆ ಅಪ್ಪಳಿಸಿದವು ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕೊರಿಯಾ ಮತ್ತು ಯುಎಸ್ ಕಳೆದ ವಾರ ಸ್ಯಾಂಗ್‌ಯಾಂಗ್ (ಡ್ಯುಯಲ್ ಡ್ರ್ಯಾಗನ್) ಆ್ಯಂಫಿಬಿಯಸ್ ಲ್ಯಾಂಡಿಂಗ್ ಯುದ್ಧ ಅಭ್ಯಾಸವನ್ನು ಪ್ರಾರಂಭಿಸಿವೆ. ಇದು ಮುಂದಿನ ಸೋಮವಾರ ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ಉತ್ತರ ಕೊರಿಯಾ ಕ್ಷಿಪಣಿ ಹಾರಿಸಿದೆ. USS ನಿಮಿಟ್ಜ್ ವಿಮಾನವಾಹಕ ನೌಕೆ ಸ್ಟ್ರೈಕ್ ಗ್ರೂಪ್ ಕೂಡ ದಕ್ಷಿಣದ ಪ್ರಮುಖ ಯುದ್ಧನೌಕೆಗಳೊಂದಿಗೆ ಸೋಮವಾರ ಪರ್ಯಾಯ ದ್ವೀಪದ ದಕ್ಷಿಣದ ನೀರಿನಲ್ಲಿ ತರಬೇತಿಯಲ್ಲಿ ಭಾಗವಹಿಸಿತ್ತು ಎಂದು ದಕ್ಷಿಣ ಕೊರಿಯಾದ ನೌಕಾಪಡೆಯನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ 70 ವರ್ಷಗಳಲ್ಲಿ ದಕ್ಷಿಣ ಕೊರಿಯಾ-ಯುಎಸ್ ಮೈತ್ರಿಯ ಆಧಾರದ ಮೇಲೆ, ದಕ್ಷಿಣ ಕೊರಿಯಾ ಮತ್ತು ಯುಎಸ್ ನೌಕಾಪಡೆಗಳು ದೃಢವಾದ ಸಂಯೋಜಿತ ಸಮುದ್ರ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಿವೆ ಎಂದು ದಕ್ಷಿಣ ಕೊರಿಯಾದ ನೌಕಾಪಡೆಯ ಕ್ಯಾಪ್ಟನ್ ಹೇಳಿದ್ದಾರೆ. ಈ ಸಮರ ಅಭ್ಯಾಸವು ಮೈತ್ರಿಕೂಟದ ಅಗಾಧ ಸಾಮರ್ಥ್ಯ ಮತ್ತು ಯುದ್ಧ ತಯಾರಿಯನ್ನು ಪ್ರದರ್ಶಿಸಿತು. ಕೊರಿಯಾ ಗಣರಾಜ್ಯವನ್ನು ರಕ್ಷಿಸಲು ಸಂಯೋಜಿತ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅವಕಾಶವಾಗಿಯೂ ಇದು ಕಾರ್ಯನಿರ್ವಹಿಸಿತು ಎಂದು ಅವರು ಹೇಳಿದರು. ಕಳೆದ ವಾರ ಉತ್ತರ ಕೊರಿಯಾ ಹೊಸ ನೀರೊಳಗಿನ ಪರಮಾಣು ಸಾಮರ್ಥ್ಯದ ದಾಳಿ ಡ್ರೋನ್ ಅನ್ನು ಪರೀಕ್ಷಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವು ವರದಿ ಮಾಡಿದೆ.
ಯುಎಸ್ ಮತ್ತು ದಕ್ಷಿಣ ಕೊರಿಯಾದ ಸಶಸ್ತ್ರ ಪಡೆಗಳನ್ನು ಬೆದರಿಸುವ ಕ್ರಮದ ಭಾಗವಾಗಿ ಉತ್ತರ ಕೊರಿಯಾ ನೀರಿನಲ್ಲಿ ಡ್ರೋನ್ ಪರೀಕ್ಷೆ ನಡೆಸಿತ್ತು. ಈ ಡ್ರೋನ್ ನಾಶವಾಗುವ ಮೊದಲು ನೀರಿನ ಅಡಿಯಲ್ಲಿ 59 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದ್ದು ಗಮನಾರ್ಹ. ಉತ್ತರ ಕೊರಿಯಾದ ಮಿಲಿಟರಿ ಈ ವಾರ ಕಿಮ್ ಜೊಂಗ್ ಉನ್ ನಿರ್ದೇಶಿಸಿದ ಮಿಲಿಟರಿ ಡ್ರಿಲ್‌ನಲ್ಲಿ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಿಯೋಜಿಸಿ ಪರೀಕ್ಷಿಸಿದೆ.
ಪರಮಾಣು ಸಾಮರ್ಥ್ಯದ ನೀರೊಳಗಡೆ ಕೆಲಸ ಮಾಡುವ ಡ್ರೋನ್ ಅನ್ನು ಯಾವುದೇ ಸಮುದ್ರ ತೀರದಲ್ಲಿ, ಬಂದರಿನಲ್ಲಿ ಹಡಗಿನ ಮೂಲಕ ನಿರ್ವಹಣೆ ಮಾಡಬಹುದಾಗಿದೆ. ಈ ಡ್ರೋನ್ ಅನ್ನು ಮಂಗಳವಾರ ದಕ್ಷಿಣ ಹಮ್ಗ್ಯಾಂಗ್ ಪ್ರಾಂತ್ಯದ ನೀರಿನಲ್ಲಿ ಇರಿಸಲಾಗಿತ್ತು. ಸುಮಾರು 80 ರಿಂದ 150 ಮೀಟರ್ ಆಳದಲ್ಲಿ 59 ಗಂಟೆ 12 ನಿಮಿಷಗಳ ಕಾಲ ನೀರಿನ ಅಡಿಯಲ್ಲಿ ಇದನ್ನು ಕ್ರೂಸ್ ಮಾಡಲಾಯಿತು.
ಇದನ್ನೂ ಓದಿ : ಉಕ್ರೇನ್‌ನ ಕೀವ್ನಲ್ಲಿ ರಷ್ಯಾದಿಂದ ಸರಣಿ ಕ್ಷಿಪಣಿ ದಾಳಿ..ಸ್ಪೋಟದಿಂದ ಎಂಟು ಮಂದಿ ಸಾವು