ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಯಹೂದಿ ವಿರೋಧಿ ಟ್ವೀಟ್ ಅನುಮೋದಿಸಿದ್ದಕ್ಕಾಗಿ ಸಾಕಷ್ಟು ಜನರ ಅಸಮಾಧಾನಕ್ಕೆ ಗುರಿಯಾಗಿರುವ ಎಲೋನ್ ಮಸ್ಕ್ ಈಗ ಆಕ್ರೋಶ ಕಡಿಮೆ ಮಾಡುವ ನಿಟ್ಟಿನಲ್ಲಿ ಮಂಗಳವಾರ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಮತ್ತು ಗಾಜಾದಲ್ಲಿ ಬಂಧಿತರಾಗಿರುವ ಒತ್ತೆಯಾಳುಗಳ ಕುಟುಂಬಗಳ ಸದಸ್ಯರನ್ನು ಭೇಟಿಯಾಗಲಿದ್ದಾರೆ.
ಮಸ್ಕ್ ಅವರೊಂದಿಗೆ ಭೇಟಿ ನಿಗದಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಹೆರ್ಜೋಗ್ ಅವರ ಕಚೇರಿ, "ಇಸ್ರೇಲ್ ಅಧ್ಯಕ್ಷರು ಮಸ್ಕ್ ಅವರೊಂದಿಗಿನ ಸಭೆಯಲ್ಲಿ, ಆನ್ಲೈನ್ನಲ್ಲಿ ಹೆಚ್ಚುತ್ತಿರುವ ಯಹೂದಿ ವಿರೋಧಿ ಅಭಿಯಾನ ಕಡಿಮೆ ಮಾಡುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಿದ್ದಾರೆ" ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇತ್ತೀಚಿನ ವಾರಗಳಲ್ಲಿ ಎಕ್ಸ್ನಲ್ಲಿ ಯಹೂದಿ ವಿರೋಧಿ ಕಂಟೆಂಟ್ ಹೆಚ್ಚು ಪ್ರಸಾರವಾಗಿದ್ದಕ್ಕಾಗಿ ಮಸ್ಕ್ ತೀವ್ರ ಟೀಕೆಗೊಳಗಾಗಿದ್ದಾರೆ. ಎಕ್ಸ್ ನಲ್ಲಿ ಯಹೂದಿ ವಿರೋಧಿ ಪೋಸ್ಟ್ಗಳನ್ನು ನಿಯಂತ್ರಿಸಲು ವಿಫಲವಾಗಿರುವುದಕ್ಕಾಗಿ ಕೂಡ ಅವರು ಟೀಕೆ ಎದುರಿಸುತ್ತಿದ್ದಾರೆ. ಜೋ ಬೈಡನ್ ಆಡಳಿತವು ಇತ್ತೀಚೆಗೆ ಮಸ್ಕ್ ಯಹೂದಿ ಜನರ ಬಗ್ಗೆ ಹೀನ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಟೀಕಿಸಿದೆ.
ಯಹೂದಿ ವಿರೋಧಿ ಸಿದ್ಧಾಂತದ ಬಗ್ಗೆ ಬರೆಯಲಾದ ಪೋಸ್ಟ್ ಒಂದಕ್ಕೆ ಉತ್ತರಿಸಿದ್ದ ಮಸ್ಕ್, ಇದು "ವಾಸ್ತವ ಸತ್ಯ" ಎಂದು ಬರೆದಿದ್ದರು. 2018 ರಲ್ಲಿ ಪಿಟ್ಸ್ಬರ್ಗ್ ಸಿನಾಗಾಗ್ನಲ್ಲಿ 11 ಜನರನ್ನು ಕೊಂದ ವ್ಯಕ್ತಿಗೆ ಪ್ರೇರೇಪಿಸಿದ್ದ ಪಿತೂರಿ ಸಿದ್ಧಾಂತದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದರು.
ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಕಂಪನಿ ಎಕ್ಸ್ ಈ ವರ್ಷದ ಅಂತ್ಯದ ವೇಳೆಗೆ 75 ಮಿಲಿಯನ್ ಡಾಲರ್ ಜಾಹೀರಾತು ಆದಾಯ ನಷ್ಟ ಅನುಭವಿಸಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ. ಕಳೆದ ವಾರ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಯಹೂದಿ ವಿರೋಧಿ ಪೋಸ್ಟ್ ಒಂದನ್ನು ಮಸ್ಕ್ ಬೆಂಬಲಿಸಿದ್ದರಿಂದ ವಾಲ್ಟ್ ಡಿಸ್ನಿ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿ ಸೇರಿದಂತೆ ಹಲವಾರು ಕಂಪನಿಗಳು ಎಕ್ಸ್ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಿವೆ.
ಏರ್ಬಿಎನ್ಬಿ, ಅಮೆಜಾನ್, ಕೋಕಾ ಕೋಲಾ ಮತ್ತು ಮೈಕ್ರೋಸಾಫ್ಟ್ನಂಥ ಕಂಪನಿಗಳ 200 ಕ್ಕೂ ಹೆಚ್ಚು ಕಂಪನಿಗಳು ಒಂದೋ ಎಕ್ಸ್ಗೆ ಜಾಹೀರಾತು ನಿಲ್ಲಿಸಿವೆ ಅಥವಾ ಹಾಗೆ ಮಾಡಲು ಯೋಜಿಸುತ್ತಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಕ್ಸ್ ಪ್ಲಾಟ್ಫಾರ್ಮ್ ಪ್ರಸ್ತುತ 11 ಮಿಲಿಯನ್ ಡಾಲರ್ ಆದಾಯ ಕಳೆದುಕೊಳ್ಳುವ ಅಪಾಯದಲ್ಲಿದೆ.
ಇದನ್ನೂ ಓದಿ : ಅಕೌಂಟಿಂಗ್ ಮಾದರಿಯ ಶೇ 46ರಷ್ಟು ಕೆಲಸ ಸ್ವಯಂಚಾಲಿತಗೊಳಿಸಲಿದೆ ಕೃತಕ ಬುದ್ಧಿಮತ್ತೆ