ಟೋಕಿಯೊ: ಗಾಂಜಾದಿಂದ ತಯಾರಿಸಲಾದ ವೈದ್ಯಕೀಯ ಉತ್ಪನ್ನಗಳನ್ನು ಕಾನೂನುಬದ್ಧಗೊಳಿಸುವ ಮಸೂದೆಗೆ ಜಪಾನ್ ಸಂಸತ್ತು ಅನುಮೋದನೆ ನೀಡಿದೆ. ಜೊತೆಗೆ ವೈದ್ಯಕೀಯ ಹೊರತುಪಡಿಸಿ ಬೇರಾವುದೇ ಉದ್ದೇಶಕ್ಕೆ ಗಾಂಜಾ ಉತ್ಪನ್ನಗಳ ಬಳಕೆಯನ್ನು ಅಪರಾಧ ಎಂದು ಸಂಸತ್ತು ಘೋಷಿಸಿದೆ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜಪಾನ್ ನ್ಯಾಷನಲ್ ಡಯಟ್ನ ಮೇಲ್ಮನೆ ಬುಧವಾರ ಪರಿಷ್ಕೃತ ಗಾಂಜಾ ಮತ್ತು ಮಾದಕವಸ್ತು ನಿಯಂತ್ರಣ ಕಾನೂನುಗಳನ್ನು ಅಂಗೀಕರಿಸಿದೆ. ಘೋಷಣೆಯಾದ ಒಂದು ವರ್ಷದೊಳಗೆ ಹೊಸ ಕಾನೂನು ಜಾರಿಗೆ ಬರಲಿದೆ.
ಪರಿಷ್ಕೃತ ಕಾನೂನುಗಳ ಅಡಿಯಲ್ಲಿ, ಗಾಂಜಾ ಗಿಡದಲ್ಲಿ ಕಂಡುಬರುವ ಗಾಂಜಾ ಮತ್ತು ಟೆಟ್ರಾಹೈಡ್ರೊಕಾನ್ನಬಿನಾಲ್ (ಟಿಎಚ್ಸಿ) ಎಂಬ ಸೈಕೋಆ್ಯಕ್ಟಿವ್ ರಾಸಾಯನಿಕವನ್ನು ಮಾದಕವಸ್ತು ಎಂದು ಪರಿಗಣಿಸಲಾಗುವುದು. ಯುವಕರು ಮತ್ತು ಇತರರು ಇದನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಇದರ ಬಳಕೆ ನಿಷೇಧಿಸಲಾಗುವುದು.
ಗಾಂಜಾ ಇಟ್ಟುಕೊಳ್ಳುವುದು ಮತ್ತು ವಿತರಿಸುವುದು ಜಪಾನ್ನಲ್ಲಿ ಈಗಾಗಲೇ ಕಾನೂನುಬಾಹಿರವಾಗಿದೆ. ಔಷಧೀಯ ಉದ್ದೇಶ ಹೊರತುಪಡಿಸಿ ಮತ್ತಾವುದಕ್ಕೂ ಇದನ್ನು ಬಳಸುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ದೇಶದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಔಷಧೀಯ ಉತ್ಪನ್ನಗಳನ್ನು ತಯಾರಿಸಲು ಗಾಂಜಾ ಗಿಡಗಳನ್ನು ಬೆಳೆಸಲು ಕೂಡ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ನಲ್ಲಿ ಜಪಾನ್ನ ಆರೋಗ್ಯ ಸಚಿವಾಲಯವು ಹೆಕ್ಸಾಹೈಡ್ರೊಕನ್ನಬಿಹೆಕ್ಸೋಲ್ ಅಥವಾ ಎಚ್ಎಎಚ್ಸಿಎಚ್ ಎಂಬ ಗಾಂಜಾದಿಂದ ಉತ್ಪಾದಿಸಿದ ಘಟಕಾಂಶವನ್ನು ನಿಷೇಧಿಸಲು ಅನುಮೋದನೆ ನೀಡಿತ್ತು. ಇಂಥ ಘಟಕಾಂಶವನ್ನು ಹೊಂದಿರುವ "ಗಾಂಜಾ ಗುಮ್ಮೀಸ್" ಎಂಬ ಉತ್ಪನ್ನವನ್ನು ಸೇವಿಸಿದ ಅನೇಕರು ಅನಾರೋಗ್ಯಕ್ಕೀಡಾಗಿದ್ದಾರೆ.
ಎಚ್ಎಎಚ್ಸಿಎಚ್ ಸಿಂಥೆಟಿಕ್ ರಾಸಾಯನಿಕವನ್ನು ನಿಯಂತ್ರಿತ ವಸ್ತುವೆಂದು ತಿಳಿಸಲಾಗಿದ್ದು, ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ತಜ್ಞರ ಸಮಿತಿಯು ಡಿಸೆಂಬರ್ 2 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಎಚ್ಎಎಚ್ಸಿಎಚ್ ಇಟ್ಟುಕೊಳ್ಳುವುದು, ಬಳಕೆ ಮತ್ತು ವಿತರಣೆಯನ್ನು ನಿಷೇಧಿಸುವ ಯೋಜನೆಗೆ ಅನುಮೋದನೆ ನೀಡಿತು. ಔಷಧೀಯ ಮತ್ತು ವೈದ್ಯಕೀಯ ಬಳಕೆ ಕಾನೂನಿನ ಅಡಿಯಲ್ಲಿ ನಿಷೇಧವನ್ನು ಉಲ್ಲಂಘಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 3 ಮಿಲಿಯನ್ ಯೆನ್ ಅಥವಾ 20,235 ಯುಎಸ್ ಡಾಲರ್ ದಂಡ ವಿಧಿಸಬಹುದು ಎಂದು ವರದಿ ತಿಳಿಸಿದೆ.
ಗಾಂಜಾ, ವೀಡ್, ಪಾಟ್ ಇವೆಲ್ಲವೂ ನಶೆ ಏರಿಸುವ ಮತ್ತು ಶಾಂತಗೊಳಿಸುವ ಪರಿಣಾಮ ಹೊಂದಿರುವ ಒಂದೇ ಮಾದರಿಯ ಸಸ್ಯಗಳಾಗಿವೆ. ಇವನ್ನು ಯಾವ ರೀತಿಯಲ್ಲಿ ಬಳಸಲಾಗುತ್ತದೆ ಎಂಬುದನ್ನು ಆಧರಿಸಿ ಇವುಗಳ ಪರಿಣಾಮ ಬದಲಾಗುತ್ತದೆ. ಬಹುತೇಕ ದೇಶಗಳಲ್ಲಿ ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಹಮಾಸ್ ಉಗ್ರರಿಂದ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನವಾಗಿರುವುದೇಕೆ ವಿಶ್ವಸಮುದಾಯ?; ನೆತನ್ಯಾಹು ಪ್ರಶ್ನೆ