ವಾಷಿಂಗ್ಟನ್ ( ಅಮೆರಿಕ) : ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ಆಗ್ರಹಿಸುತ್ತಿರುವ ಸಿಖ್ ಫಾರ್ ಜಸ್ಟಿಸ್ ಎಂಬ ಪ್ರತ್ಯೇಕತಾವಾದಿ ಸಂಘಟನೆ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತದ ಪ್ರಜೆಯೊಬ್ಬ ಸಂಚು ರೂಪಿಸಿದ ಆರೋಪ ಕೇಳಿಬಂದಿದ್ದು, ದೋಷಾರೋಪಣೆ ಸಲ್ಲಿಕೆಯಾಗಿದೆ. ಈ ಬೆನ್ನಲ್ಲೇ ಅಮೆರಿಕವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಮಂಗಳವಾರ ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿದೆ. ನಾವು ಕೂಡ ತನಿಖೆ ನಡೆಸುತ್ತೇವೆ, ಫಲಿತಾಂಶಗಳಿಗಾಗಿ ನಿರೀಕ್ಷಿಸಿ. ನಾನು ಪರೋಕ್ಷವಾಗಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ, ಇದು ಕಾನೂನಿಗೆ ಸಂಬಂಧಿಸಿದ ವಿಷಯವಾಗಿದೆ. ಅಮೆರಿಕ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಕೋರ್ಟ್ನಲ್ಲಿ ಪ್ರಕರಣವನ್ನು ಪ್ರಸ್ತುತಪಡಿಸುತ್ತಿರುವಾಗ ನಾನು ಮಾತನಾಡುವುದು ಸೂಕ್ತವಲ್ಲ. ವಿದೇಶಾಂಗ ವ್ಯವಹಾರಗಳ ಸಚಿವರು ನೇರವಾಗಿ ತಮ್ಮ ವಿದೇಶಿ ಕೌಂಟರ್‌ನೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನಾವು ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.
ಸಿಖ್ ಪ್ರತ್ಯೇಕತಾವಾದಿ ಚಳವಳಿಯ ಅಮೆರಿಕ ಮೂಲದ ನಾಯಕ ಮತ್ತು ನ್ಯೂಯಾರ್ಕ್‌ನಲ್ಲಿನ ನಾಗರಿಕರನ್ನು ಹತ್ಯೆ ಮಾಡಲು ವಿಫಲವಾದ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತೀಯ ಪ್ರಜೆಯ ವಿರುದ್ಧ ಅಮೆರಿಕ ನ್ಯಾಯ ಇಲಾಖೆ ದೋಷಾರೋಪಣೆ ಬಹಿರಂಗಪಡಿಸಿದ ಬಳಿಕ ಮ್ಯಾಥ್ಯೂ ಮಿಲ್ಲರ್ ಇಂತಹ ಹೇಳಿಕೆ ನೀಡಿದ್ದಾರೆ.
ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತ ಅಮೆರಿಕ ಪ್ರಜೆಯೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಅಮೆರಿಕ ಆರೋಪಿಸಿದೆ. ಜೂನ್ 30 ರಂದು ಗುಪ್ತಾ ಅವರನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿದೆ. ಇದೀಗ ನಿಖಿಲ್ ಗುಪ್ತಾ ಹಸ್ತಾಂತರಕ್ಕಾಗಿ ಅಮೆರಿಕ ಕಾಯುತ್ತಿದೆ. ಆತ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದ ಅಂತ ಅಮೆರಿಕ ಆರೋಪಿಸಿದೆ. ಸದ್ಯಕ್ಕೆ ಗುಪ್ತಾ ಬಂಧನದಲ್ಲಿದ್ದಾನೆ.
ಗುಪ್ತಾ ಅವರು ಭಾರತೀಯ ಸರ್ಕಾರಿ ನೌಕರನ ಸಹವರ್ತಿ ಎಂದು ಆರೋಪಿಸಲಾಗಿದೆ ಮತ್ತು ಭಾರತೀಯ ಸರ್ಕಾರಿ ನೌಕರನೊಂದಿಗಿನ ತನ್ನ ಸಂವಹನದಲ್ಲಿ ಅವರು ಅಂತಾರಾಷ್ಟ್ರೀಯ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಭಾರತದ ಸರ್ಕಾರಿ ಉದ್ಯೋಗಿಯೊಬ್ಬರು ಹತ್ಯೆಯ ಸಂಚನ್ನು ಭಾರತದಿಂದ ನಿರ್ದೇಶಿಸಿದ್ದರು ಎಂದು ದೋಷಾರೋಪಣೆಯಲ್ಲಿ ಹೇಳಲಾಗಿದೆ. ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ಆಪಾದಿತ ಕೊಲೆಗಾರನಿಗೆ US $ 100,000 ನೀಡಲಾಗಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿಕೊಂಡಿದೆ.
ಇದನ್ನೂ ಓದಿ : ಸಿಖ್ ಪ್ರತ್ಯೇಕತಾವಾದಿ ಹತ್ಯೆಗೆ ಭಾರತ ಸಂಚು - ಅಮೆರಿಕ ಆರೋಪ : ನಾವು ಹೇಳಿದ್ದು ಇದನ್ನೇ ಎಂದ ಕೆನಡಾ
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 5 ದಿನಗಳ ಹಿಂದಷ್ಟೇ ಪ್ರತಿಕ್ರಿಯೆ ನೀಡಿದ್ದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಅವರು, ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವನ್ನು ಅಮೆರಿಕವು ಭಾರತೀಯ ವ್ಯಕ್ತಿಯ ಮೇಲೆ ಹೊರಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮತ್ತೊಂದೆಡೆ, ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದರು.