ಜೆರುಸಲೆಮ್: ಕಳೆದ ಎರಡು ತಿಂಗಳಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದ್ದು, ಇಂದು 66ನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ಹಮಾಸ್ ಮೇಲಿನ ದಾಳಿಯನ್ನು ಇಸ್ರೇಲಿ ಪಡೆಗಳು ಪಟ್ಟುಬಿಡದೆ ಮುಂದುವರೆಸಿದ್ದಾರೆ. ಇದರ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ಗೆ ಶರಣಾಗುವಂತೆ ಕರೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಕಚೇರಿ ಪೋಸ್ಟ್ ಮಾಡಿರುವ ವಿಡಿಯೋ ಒಂದರಲ್ಲಿ, ಪ್ರಧಾನಿ ನೆತನ್ಯಾಹು, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ಗಾಗಿ ಬಲಿಯಾಗದಿರಿ ಎಂದು ಹೇಳಿರುವ ಅವರು, ಕಳೆದ ಕೆಲ ದಿನಗಳಿಂದ ಹಲವಾರು ಹಮಾಸ್ ಉಗ್ರರು ನಮ್ಮ ಪಡೆಗಳಿಗೆ ಶರಣಾಗಿದ್ದಾರೆ. ಅಲ್ಲದೇ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ನಮ್ಮ ಪಡೆಗಳೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ಯುದ್ಧವು ಮುಂದುವರೆದಿದೆ, ಹಮಾಸ್‌ನ ಅಂತ್ಯದ ಕ್ಷಣ ಆರಂಭವಾಗಿದೆ. ನಾನು ಹಮಾಸ್ ಭಯೋತ್ಪಾದಕರಿಗೆ ಸಿನ್ವಾರ್‌ಗಾಗಿ ಬಲಿಯಾಗದಿರಿ ಎಂದು ಹೇಳುತ್ತೇನೆ ಎಂದು ವಿಡಿಯೋದಲ್ಲಿ ಎಚ್ಚರಿಸಿದ್ದಾರೆ.
ಇದರ ಮಧ್ಯೆ ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಗಾಜಾ ನಗರದಲ್ಲಿ ಪ್ಯಾಲೆಸ್ಟೈನ್ ಸಂಪರ್ಕ ಕಲ್ಪಿಸುವ ದೊಡ್ಡ ಸುರಂಗ ಜಾಲವನ್ನು ಕಂಡುಹಿಡಿದಿರುವುದಾಗಿ ಹೇಳಿದ್ದಾರೆ. ಅಲ್ಲದೇ ಸೇನಾಪಡೆ ಆ ಪ್ರದೇಶವನ್ನು ವಶಪಡಿಸಿಕೊಂಡಿರುವುದಾಗಿಯೂ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇಸ್ರೇಲ್ಗೆ ಹಮಾಸ್ ಎಚ್ಚರಿಕೆ: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ನೊಂದಿಗೆ ಯುದ್ಧದಲ್ಲಿ ತೊಡಗಿರುವ ಪ್ಯಾಲೆಸ್ಟೇನ್ನ ಹಮಾಸ್ ಸಶಸ್ತ್ರ ವಿಭಾಗದ ವಕ್ತಾರ ಅಬು ಒಬೇದಾ, ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ತಮ್ಮ ವಶದಲ್ಲಿರುವ ಯಾವುದೇ ಒತ್ತೆಯಾಳುವನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಇಸ್ರೇಲ್ಗೆ ಎಚ್ಚರಿಸಿದ್ದಾರೆ.
ವಿನಿಮಯ ಮತ್ತು ಮಾತುಕತೆ ಇಲ್ಲದೆ ಒತ್ತೆಯಾಳುಗಳನ್ನು ಜೀವಂತವಾಗಿ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಇಸ್ರೇಲ್ ಹಿಡಿದಿರುವ ಪ್ಯಾಲೆಸ್ತಿನಿಯನ್ ಕೈದಿಗಳ ಬಿಡುಗಡೆಯನ್ನು ಉಲ್ಲೇಖಿಸುತ್ತದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
17,000 ಪ್ಯಾಲೆಸ್ತಿನಿಗರ ಸಾವು: ದಕ್ಷಿಣ ಗಾಜಾದಲ್ಲಿ ಇಸ್ರೇಲ್ ದಾಳಿಯ ಉಲ್ಬಣದಿಂದಾಗಿ ಸಾವಿರಾರು ಜನರು ಆಶ್ರಯವನ್ನು ಹುಡುಕಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಇದುವರೆಗೆ 17,700 ಪ್ಯಾಲೆಸ್ತಿನಿಯರು ಸಾವನ್ನಪ್ಪಿದ್ದಾರೆ. ಶೇಕಡ 40 ರಷ್ಟು 18 ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹಮಾಸ್ ನೇತೃತ್ವದಲ್ಲಿ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದೆ. ಇದುವರೆಗೆ 7,000ಕ್ಕೂ ಹೆಚ್ಚು ಹಮಾಸ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ಘೋಷಿಸಿದೆ.
ಇದನ್ನೂ ಓದಿ: 7 ಸಾವಿರ ಹಮಾಸ್ ಉಗ್ರರ ಹತ್ಯೆ; ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ಶೇಕಡ 90ರಷ್ಟು ಜನ!