ವಾಷಿಂಗ್ಟನ್: ಭಾರತದ ಕೋವಿಡ್-19 ಲಸಿಕೆ ತಯಾರಿಕೆ ಸಾಮರ್ಥ್ಯವು ಅಮೆರಿಕದ ವೈಟ್ಹೌಸ್ನಲ್ಲಿ ಶ್ಲಾಘನೆ ಪಡೆದಿದೆ. ವೈಟ್ಹೌಸ್ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವೈಟ್ ಹೌಸ್ ಕೋವಿಡ್-19 ರೆಸ್ಪಾನ್ಸ್ ಕೊ -ಆರ್ಡಿನೇಟರ್ ಆಗಿರುವ ಆಶಿಶ್ ಝಾ ಭಾರತದ ಲಸಿಕೆ ತಯಾರಿಕೆ ಸಾಮರ್ಥ್ಯವನ್ನು ಪ್ರಶಂಸಿಸಿದರು. ವಿಶ್ವದಲ್ಲಿ ಭಾರತ ದೇಶವು ಲಸಿಕೆಗಳ ಪ್ರಮುಖ ರಫ್ತುದಾರನಾಗಿದ್ದು, ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ಅದ್ಭುತ ಎಂದು ಅವರು ಕೊಂಡಾಡಿದ್ದಾರೆ.
ಕೋವಿಡ್ ಬಿಕ್ಕಟ್ಟನ್ನು ಭಾರತ ನಿಭಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಆಶಿಶ್ ಝಾ ಉತ್ತರಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಝಾ, ಭಾರತವು ತನ್ನ ಅದ್ಭುತ ಉತ್ಪಾದನಾ ಸಾಮರ್ಥ್ಯದಿಂದಾಗಿ ಲಸಿಕೆಗಳ ಪ್ರಮುಖ ರಫ್ತುದಾರನಾಗಿದೆ ಎಂದು ಹೇಳಿದರು.
ಭಾರತದಲ್ಲಿ ಲಸಿಕೆ ಉತ್ಪಾದನೆ ನಿಧಾನವಾಗಿರುವುದು ಮತ್ತು ಕ್ವಾಡ್ ಸಹಕಾರ ನಿಧಾನವಾಗಿರುವ ಬಗ್ಗೆ ಮತ್ತು ಭಾರತ ಲಸಿಕೆ ತಯಾರಿಸುವುದು ಮತ್ತು ಕ್ವಾಡ್ ರಾಷ್ಟ್ರಗಳು ಅವನ್ನು ವಿಶ್ವಾದ್ಯಂತ ಪೂರೈಸುವ ಕಾರ್ಯ ನಿಧಾನವಾಗಿರುವ ಬಗ್ಗೆ ಅವರಿಗೆ ಇದೇ ಸಂದರ್ಭದಲ್ಲಿ ಅವರಿಗೆ ಪ್ರಶ್ನೆ ಮಾಡಲಾಯಿತು.
ಇದಕ್ಕೆ ಉತ್ತರಿಸಿದ ಝಾ, ನಾನು ಈ ವಿಷಯವನ್ನು ತುಂಬಾ ಹತ್ತಿರದಿಂದ ಗಮನಿಸಿಲ್ಲ. ಲಸಿಕೆಗಳಿಗೆ ಜಾಗತಿಕ ಬೇಡಿಕೆಯು ನಿಧಾನವಾಗಿರುವುದರಿಂದ, ಮತ್ತು ನಾವು ಬಹಳಷ್ಟು ಲಸಿಕೆಗಳನ್ನು ತಯಾರಿಸಿರುವುದರಿಂದ ಇದು ಸ್ವಲ್ಪಮಟ್ಟಿಗೆ ನಿಧಾನವಾಯಿತು ಎಂಬುದು ನನ್ನ ತಿಳಿವಳಿಕೆ ಎಂದು ಹೇಳಿದರು.
ಕ್ವಾಡ್ ಅಥವಾ ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ ಎಂದೂ ಕರೆಯಲ್ಪಡುವ ಇದು ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಹೀಗೆ ನಾಲ್ಕು ದೇಶಗಳ ನಡುವಿನ ಕಾರ್ಯತಂತ್ರದ ಭದ್ರತಾ ಒಕ್ಕೂಟವಾಗಿದೆ. ಕ್ವಾಡ್‌ನ ಮುಖ್ಯ ಗುರಿಯು ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಬೆಂಬಲಿಸುವುದು ಮತ್ತು ಪೂರೈಕೆ ಸರಪಳಿಗಳನ್ನು ನಿರ್ಮಿಸುವುದಾಗಿದೆ.
ಆದರೆ ಈ ಆಡಳಿತಕ್ಕೆ ಕ್ವಾಡ್ ಪಾಲುದಾರಿಕೆಯು ನಿಜವಾಗಿಯೂ ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಭಾರತವು ತನಗೆ ಮಾತ್ರವಲ್ಲದೇ ಜಗತ್ತಿಗೆ ಲಸಿಕೆಗಳ ಪ್ರಮುಖ ತಯಾರಕವಾಗಿದೆ. ಇದು ನಿಜವಾಗಿಯೂ ಗಮನಿಸಬೇಕಾದ ವಿಷಯ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶದಲ್ಲಿ ಸ್ಪುಟ್ನಿಕ್ ಲಸಿಕೆ ತಯಾರಿಕೆಗೆ ರೆಡ್ಡಿಸ್ ಜತೆ ಶಿಲ್ಪಾ ಮೆಡಿಕೇರ್ ಒಪ್ಪಂದ