ನ್ಯೂಯಾರ್ಕ್( ಅಮೆರಿಕ): ಭಯೋತ್ಪಾದನೆ, ಜಾಗತಿಕ ದಕ್ಷಿಣ ಮತ್ತು ಕಡಲ ಭದ್ರತೆಯ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಭಾರತವು ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ತನ್ನ ಡಿಸೆಂಬರ್ ಅಧ್ಯಕ್ಷತೆಯನ್ನು ಮುಕ್ತಾಯಗೊಳಿಸಿದೆ. ಮಾಸಿಕ ಬದಲಾವಣೆಯ ಆಧಾರದಲ್ಲಿ ಡಿಸೆಂಬರ್ 1ರಂದು ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.
ವಿಶ್ವಸಂಸ್ಥೆ ಭದ್ರತಾ ಮಂಡಳಿ ವರ್ಷದ ಕೊನೆಯ ನಿಗದಿತ ಸಭೆ ಮತ್ತು ಮಂಡಳಿಯಲ್ಲಿ ಭಾರತದ ಸದಸ್ಯತ್ವದ ಅವಧಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಕಳೆದ ಎರಡು ವರ್ಷಗಳಲ್ಲಿ, ನಾವು ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಪರವಾಗಿ ಮಾತನಾಡಿದ್ದೇವೆ. ಭಯೋತ್ಪಾದನೆಯಂತಹ ಮಾನವೀಯತೆಯ ವಿರುದ್ಧದ ಸಾಮಾನ್ಯ ಶತ್ರುಗಳ ವಿರುದ್ಧ ಧ್ವನಿ ಎತ್ತುವಲ್ಲಿ ನಾವು ಹಿಂಜರಿಯಲಿಲ್ಲ ಎಂದು ಹೇಳಿದರು. ಭದ್ರತಾ ಮಂಡಳಿಯಲ್ಲಿ 2021-2022 ರ ಅವಧಿಯ ಎರಡು ವರ್ಷಗಳ ಸದಸ್ಯತ್ವ ಮುಗಿಸಿ ನಿರ್ಗಮಿಸಲು ಭಾರತ ಸಜ್ಜಾಗಿದ್ದು, ಡಿ.31ಕ್ಕೆ ಇದು ಕೊನೆಗೊಳ್ಳಲಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳ ಅಗತ್ಯತೆಯ ಕುರಿತು ಮಾತನಾಡಿದ ಅವರು, ಈ ಸಮಯಕ್ಕೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಯ ಅಗತ್ಯವಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಈ ಅಧಿಕಾರಾವಧಿಯಲ್ಲಿ ಬದಲಾವಣೆಗೆ ಹೆಚ್ಚು ಪ್ರತಿರೋಧವಿತ್ತು ಎನ್ನುವುದು ನಾವು ಮಂಡಳಿಯಿಂದ ನಿರ್ಗಮಿಸುವ ಹೊತ್ತಿಗೆ ನಮಗೆ ಮನವರಿಕೆಯಾಗಿದೆ. ನಾವು ಭದ್ರತಾ ಮಂಡಳಿಯಲ್ಲಿ 1.4 ಶತಕೋಟಿ ಭಾರತೀಯರ ಪರವಾಗಿ ಅಥವಾ 1/6 ಮಾನವೀಯತೆಯ ಪರವಾಗಿ ಮಾತನಾಡುತ್ತಿದ್ದೆವು ಎಂಬ ಪ್ರಜ್ಞೆ ನಮತೆ ಇತ್ತು ಎಂದು ಕಾಂಬೋಜ್ ನೆನಪಿಸಿಕೊಂಡರು.
ಭಾರತದ ಜೊತೆಗೆ ಐರ್ಲೆಂಡ್, ಕೀನ್ಯಾ, ಮೆಕ್ಸಿಕೋ ಮತ್ತು ನಾರ್ವೆ ಡಿಪ್ಲೊಮೇಟ್ಸ್ ಕೂಡ 2 ವರ್ಷಗಳ ಅವಧಿಯ ಸದಸ್ಯತ್ವ ಕೊನೆಗೊಳ್ಳಲಿದೆ. ಖಾಯಂ ಅಲ್ಲದ ಐದು ಹೊರಹೋಗುವ ಸದಸ್ಯರಿಗೆ ಮಂಡಳಿಯ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದು ಕಾಂಬೋಜ್ ಇದೇ ವೇಳೆ ಹೇಳಿದರು.
ಇದನ್ನೂ ಓದಿ: ತವಾಂಗ್ ಸಂಘರ್ಷ; ಭಾರತ - ಚೀನಾ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಅಡ್ಡಿ