ಬೀಜಿಂಗ್ (ಚೀನಾ): ಮಹತ್ವದ ಬೆಳೆವಣಿಗೆಯೊಂದರಲ್ಲಿ ಕಾಶ್ಮೀರ ವಿಷಯದ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿದೆ. ಗಡಿ ವಿವಾದವನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕೆಂದು ಚೀನಾ ಅಭಿಪ್ರಾಯಪಟ್ಟಿದೆ.
ಬೀಜಿಂಗ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, ಕಾಶ್ಮೀರದ ವಿಷಯ ಸಂಬಂಧ ಪಾಕಿಸ್ತಾನಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಇದು ಉಭಯ ದೇಶಗಳ ನಡುವಿನ ಐತಿಹಾಸಿಕ ಸಮಸ್ಯೆ. ವಿಶ್ವಸಂಸ್ಥೆ ಚಾರ್ಟರ್, ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಶಾಂತಿಯುತವಾಗಿ ಪರಿಹರಿಸಬೇಕೆಂದು ಅವರು ತಿಳಿಸಿದ್ಧಾರೆ.
ಎರಡು ರಾಷ್ಟ್ರಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದಾದ ಏಕಪಕ್ಷೀಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯಬೇಕು. ಈ ಸಮಸ್ಯೆಯನ್ನು ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಪರಿಹರಿಸಬೇಕು. ಏಕಪಕ್ಷೀಯ ಕ್ರಮಗಳನ್ನು ತಪ್ಪಿಸಬೇಕೆಂದೂ ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಸೇರಿದಂತೆ ಹಲವು ದೇಶಗಳು ಕಾಶ್ಮೀರದ ವಿಷಯದ ಬಗ್ಗೆ ಆಗಾಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೂ, ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಯಾವಾಗಲೂ ತಿರಸ್ಕರಿಸುವುದಾಗಿ ಭಾರತ ದೃಢವಾಗಿ ಹೇಳಿದೆ.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಪರಮಾಣು ಅಸ್ತ್ರ ಪ್ರಯೋಗಿಸುವ ಯಾವುದೇ ಉದ್ದೇಶ ನಮಗಿಲ್ಲ: ಪುಟಿನ್