ನವದೆಹಲಿ: ಖಲಿಸ್ತಾನಿ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವಿನ ವಾತಾವರಣ ಹದಗೆಟ್ಟಿದ್ದು, ಅಲ್ಲಿನ ಭಾರತೀಯ ನಾಗರಿಕರಿಗೆ ಎಚ್ಚರದಿಂದಿರಲು ಕೇಂದ್ರ ಸರ್ಕಾರ ಸಲಹೆ ನೀಡಿದೆ. ಭಾರತೀಯರು, ಸಂಸ್ಥೆಗಳ ಮೇಲೆ ಕೆನಡಾದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು, ನಾಗರಿಕರು ಎಚ್ಚರ ವಹಿಸಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಅಲ್ಲಿನ ಸರ್ಕಾರದ ಆಶ್ರಯದಲ್ಲಿ ಭಾರತ ವಿರೋಧಿ ಚಟುವಟಿಕೆಗಳು, ದ್ವೇಷಪೂರಿತ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಸಮಯದಲ್ಲಿ ಕೆನಡಾಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರು ತಮ್ಮ ಪ್ರಯಾಣವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಗಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಕೂಡ ಹೊರಡಿಸಿದೆ.
ಭಾರತ ವಿರೋಧಿ ಅಜೆಂಡಾ ಪರವಾಗಿರುವ ಭಾರತೀಯ ಸಮುದಾಯದ ಜನರು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಬೆದರಿಕೆಗಳು ಬರುತ್ತಿವೆ. ಆದ್ದರಿಂದ ಹಿಂಸಾತ್ಮಕ ಘಟನೆಗಳು ನಡೆಯುವ ಪ್ರದೇಶಗಳಿಗೆ ಹೋಗದಂತೆ ವಿನಂತಿಸಲಾಗಿದೆ. ಕೆನಡಾದಲ್ಲಿರುವ ಭಾರತೀಯರು ಮತ್ತು ಭಾರತೀಯ ಸಂಘಟನೆಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯೂ ಇದೆ ಎಂದು ಸರ್ಕಾರ ಹೇಳಿದೆ.
ಹೆಸರು ನೋಂದಾಯಿಸಿ ; ಕೆನಡಾದಲ್ಲಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಪ್ರತಿಕೂಲ ವಾತಾವರಣ ಗಮನದಲ್ಲಿಟ್ಟುಕೊಂಡು ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯರು ತಮ್ಮ ಹೆಸರನ್ನು ಒಟ್ಟಾವಾದಲ್ಲಿನ ಹೈಕಮಿಷನ್ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್‌ನಲ್ಲಿ ನೋಂದಾಯಿಸಿ. ಅಹಿತಕರ ಘಟನೆಗಳ ಸಂದರ್ಭದಲ್ಲಿ ತ್ವರಿತ ಸಂಪರ್ಕಕ್ಕೆ ಇದು ಸಾಧ್ಯವಾಗುತ್ತದೆ. ಪ್ರಮುಖವಾಗಿ ಕೆನಡಾಕ್ಕೆ ಹೋಗಲು ನಿರ್ಧರಿಸಿದ ಭಾರತೀಯರು ತಮ್ಮ ಪ್ರಯಾಣವನ್ನು ಮರುಪರಿಶೀಲಿಸಿ ಎಂದು ಸೂಚನೆಯಲ್ಲಿ ತಿಳಿಸಿದೆ.
ಕೆನಡಾ ಗಾಯಕನ ಪ್ರವಾಸ ರದ್ದು: ಮತ್ತೊಂದೆಡೆ, ಕೆನಡಾದ ಗಾಯಕ ಶುಭನೀತ್ ಸಿಂಗ್ ಅವರ ಭಾರತ ಪ್ರವಾಸ ರದ್ದಾಗಿದೆ. 'ಸ್ಟಿಲ್ ರೋಲಿನ್' ಎಂಬ ಶೋ ಅನ್ನು ಆನ್‌ಲೈನ್ ಟಿಕೆಟ್ ಮೂಲಕ ಬುಕ್ ಮೈ ಶೋ ಆಯೋಜಿಸಿತ್ತು. ಪ್ರಯಾಣ ರದ್ದಾದ ಹಿನ್ನೆಲೆಯಲ್ಲಿ ಕಾಯ್ದಿರಿಸಿದ ಟಿಕೆಟ್ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಕಂದಕ ಸೃಷ್ಟಿಸಿದ ಖಲಿಸ್ತಾನ್ ಹೋರಾಟ: ಭಾರತ ಮತ್ತು ಕೆನಡಾದ ಮಧ್ಯೆ ಕಂದಕ ಸೃಷ್ಟಿಗೆ ಖಲಿಸ್ತಾನ್ ಹೋರಾಟವೇ ಕಾರಣವಾಗಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಗಂಭೀರ ಆರೋಪ ಮಾಡಿದ್ದರು. ಇದಾದ ಬಳಿಕ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಕೆನಡಾ ಈಗಾಗಲೇ ಭಾರತೀಯ ರಾಯಭಾರಿಯನ್ನು ದೇಶದಿಂದ ಹೊರಹಾಕಿದ್ದರೆ. ಅದಕ್ಕೆ ಪ್ರತಿಯಾಗಿ ಭಾರತವೂ ಕೆನಡಾ ರಾಯಭಾರಿಯನ್ನು ಉಚ್ಚಾಟಿಸಿದೆ.
ಇದನ್ನೂ ಓದಿ: ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಪ್ರಧಾನಿ ಟ್ರುಡೊ 'ನಿರ್ಲಜ್ಜ ಕ್ರಮ': ಯುಎಸ್ ತಜ್ಞರ ಅಭಿಪ್ರಾಯ