ಇಸ್ಲಾಮಾಬಾದ್: ಇಮ್ರಾನ್ ಖಾನ್ ಶಿಫಾರಸಿನಂತೆ ಪಾಕಿಸ್ತಾನದ ಸಂಸತ್ತು 'ರಾಷ್ಟ್ರೀಯ ಅಸೆಂಬ್ಲಿ'ಯನ್ನು ಪಾಕಿಸ್ತಾನದ ಅಧ್ಯಕ್ಷ ನಿನ್ನೆ ವಿಸರ್ಜಿಸಿದ್ದರು. ಆದ್ರೆ, ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುವ ಕಾರಣ ದೇಶದ ಸಂವಿಧಾನದ 224 ಎ ವಿಧಿಯಡಿ ಹಂಗಾಮಿ ಪ್ರಧಾನಿ ನೇಮಕವಾಗುವವರೆಗೂ ಇಮ್ರಾನ್ ಖಾನ್ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ತಿಳಿದುಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ, 'ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಅಹ್ಮದ್ ಖಾನ್ ಅವರು ಹಂಗಾಮಿ ಪ್ರಧಾನಿ ನೇಮಕವಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ' ಎಂದು ತಿಳಿಸಿದ್ದಾರೆ.
ನಿನ್ನೆ ಇಮ್ರಾನ್ ಖಾನ್ ಶಿಫಾರಸಿನಂತೆ ರಾಷ್ಟ್ರೀಯ ಅಸೆಂಬ್ಲಿಯನ್ನು ಆರಿಫ್ ಅಲ್ವಿ ವಿಸರ್ಜಿಸಿದ್ದರು. ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಡೆಪ್ಯುಟಿ ಸ್ಪೀಕರ್ ಖಾಸಿಂ ಸೂರಿ, 'ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಸಂವಿಧಾನದ 5ನೇ ವಿಧಿಯ ಉಲ್ಲಂಘನೆಯಾಗಿದೆ' ಎಂದು ಅಭಿಪ್ರಾಯಪಟ್ಟು, ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದರು. ಅವಿಶ್ವಾಸ ಗೊತ್ತುವಳಿ ತಿರಸ್ಕೃತಗೊಂಡ ಬಳಿಕ ಹೊಸ ಕಾರ್ಯತಂತ್ರಗಳನ್ನು ವಿರೋಧ ಪಕ್ಷಗಳು ರೂಪಿಸುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ: ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ: ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಮುಂದುವರಿಕೆ