ಸಿಂಧ್(ಪಾಕಿಸ್ತಾನ): ಪ್ರಸೂತಿಯ ವೇಳೆ ವೈದ್ಯರ ಎಡವಟ್ಟಿನಿಂದ ನವಜಾತ ಶಿಶುವಿನ ತಲೆ ಕಟ್ ಆಗಿ ಮಹಿಳೆಯ ಹೊಟ್ಟೆಯಲ್ಲೇ ಉಳಿದುಕೊಂಡು, ಪ್ರಾಣಕ್ಕೆ ಎರವಾದ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯ ಮೂಲಕ ಶಿಶುವಿನ ತಲೆಯನ್ನು ಹೊರತೆಗೆದು ಮಹಿಳೆಯ ಜೀವ ಉಳಿಸಲಾಗಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತಾರ್ಪಾರ್ಕರ್ ಜಿಲ್ಲೆಯ ಹಳ್ಳಿಯೊಂದರ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಹಿಂದು ಮಹಿಳೆಯೊಬ್ಬಳನ್ನು ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಸಮೀಪದ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಅಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಇರಲಿಲ್ಲ.
ಈ ವೇಳೆ ಅಲ್ಲಿ ಇದ್ದ ವೈದ್ಯರೇ ಗರ್ಭಿಣಿಗೆ ಪ್ರಸೂತಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ಶಿಶುವಿನ ತಲೆ ಕಟ್ ಆಗಿದೆ. ದೇಹವನ್ನು ಮಾತ್ರ ಹೊರತೆಗೆಯಲಾಗಿದೆ. ಮಹಿಳೆ ನೋವಿನಿಂದ ಒದ್ದಾಡಿದ್ದಾಳೆ. ಅದು ಅವಳ ಪ್ರಾಣಕ್ಕೂ ಅಪಾಯಕಾರಿಯಾಗಿತ್ತು. ಈ ವೇಳೆ ಹತ್ತಿರದ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಯೂ ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಅಲ್ಲಿಂದ ಎಲ್ಯುಎಮ್ಎಚ್ಎಸ್ ಆಸ್ಪತ್ರೆಗೆ ತರಲಾಗಿದೆ.
ಎಲ್ಯುಎಮ್ಎಚ್ಎಸ್ ಆಸ್ಪತ್ರೆಯಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಉಳಿದಿದ್ದ ನವಜಾತ ಶಿಶುವಿನ ತಲೆಯನ್ನು ಹೊರತೆಗೆಯಲಾಗಿದೆ. ಇದರಿಂದ ತಾಯಿಯ ಗರ್ಭಕ್ಕೆ ಪೆಟ್ಟಾಗಿದೆ. ಆ ಮಹಿಳೆಯ ಜೀವ ಉಳಿದಿದ್ದೇ ಪವಾಡ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ತನಿಖೆಗೆ ಸೂಚನೆ: ಇನ್ನು ಪ್ರಸೂತಿ ವೈದ್ಯರು ಇರದಿದ್ದರೂ, ಅನನುಭವಿ ವೈದ್ಯರು ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಕ್ಕೆ ಎರವಾಗಿದ್ದ ವೈದ್ಯರ ವಿರುದ್ಧ ಕ್ರಮ ಮತ್ತು ತನಿಖೆಗೆ ಆದೇಶಿಸಲಾಗಿದೆ. ಮಹಿಳೆ ಒದ್ದಾಡುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ವೈದ್ಯ ಸಿಬ್ಬಂದಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಓದಿ: 'ಮಹಾ' ಸರ್ಕಾರದಲ್ಲಿ ಬಂಡಾಯ: ಶಿವಸೇನಾ ನಾಯಕರೊಂದಿಗೆ ಸಿಎಂ ಉದ್ಧವ್ ಸಭೆ