ಸಿಯೋಲ್: ವ್ಯವಹಾರಿಕ ಭಾಷೆಯಾಗಿರುವ ಇಂಗ್ಲಿಷ್ ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ಹಿನ್ನೆಲೆ ಅನೇಕ ಇಂಗ್ಲಿಷ್ ಪ್ರಭಾವ ಹೊಂದಿರದ ದೇಶಗಳು ಇಂಗ್ಲಿಷ್ ಕಲಿಕೆಗೆ ಒತ್ತು ನೀಡುತ್ತಿವೆ. ಇದೇ ಕಾರಣಕ್ಕೆ ಒಂದು ಹೆಜ್ಜೆ ಮುಂದಾಗಿರುವ ಸಿಯೋಲ್ ಪ್ರಾಥಮಿಕ ಮತ್ತು ಮಧ್ಯಮಿಕ ಶಾಲಾ ಹಂತದಲ್ಲೇ ಮಕ್ಕಳ ಇಂಗ್ಲಿಷ್ ಕಲಿಕೆ ಸುಧಾರಣೆಗಾಗಿ ಇಂಗ್ಲೀಷ್ ಟ್ಯೂಟರ್ (ಕಲಿಕೆ) ರೋಬೋಟ್ಗಳನ್ನು ಪರಿಚಯಿಸಲು ಮುಂದಾಗಿದೆ. ಈ ರೋಬೋಟ್ಗಳು ಮಕ್ಕಳ ಜೊತೆಗೆ ಒನ್ ಟು ಒನ್ ಇಂಗ್ಲಿಷ್ ಸಂಪರ್ಕ ಬೆಳೆಸಲಿದ್ದು, ಅವರ ಭಾಷಾ ಕಲಿಕೆಯನ್ನು ಹೆಚ್ಚಿಸಲಿವೆ ಎಂದು ಮುನ್ಸಿಪಲ್ ಶಿಕ್ಷಣ ಕಚೇರಿ ತಿಳಿಸಿದೆ.
ಸಿಯೋಲ್ ಮೆಟ್ರೋಪಾಲಿಟನ್ ಆಫೀಸ್ ಆಫ್ ಎಜುಕೇಷನ್, ಸಣ್ಣ ಮಕ್ಕಳ ಇಂಗ್ಲಿಷ್ ಶಿಕ್ಷಣ ಕಲಿಕೆಗೆ ನೆರವಾಗಲು ರೋಬೋಟ್ ಬಳಕೆಗೆ ಮುಂದಾಗಿದೆ ಎಂದು ಯೊನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ಟ್ಯೂಟರ್ ರೋಬೋಟ್ ಅನ್ನು ಖಾಸಗಿ ಕಂಪನಿ ಅಭಿವೃದ್ಧಿ ಪಡಿಸಿದ್ದು, ಮುಂದಿನ ವರ್ಷ ಮಾರ್ಚ್ನಿಂದ ರಾಜಧಾನಿಯ ಐದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪರೀಕ್ಷಾರ್ಥ ಪ್ರಯೋಗದ ಅಂಗವಾಗಿ ಪರಿಚಯಿಸಲಿದೆ ಎಂದು ಕಚೇರಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ಈ ಟ್ಯೂಟರ್ ರೋಬೋಟ್ಗಳು ರೆಸ್ಟೋರೆಂಟ್ನಲ್ಲಿ ಸರ್ವೀಸ್ ಮಾಡುವ ರೋಬೋಟ್ನಂತೆ ಇರಲಿವೆ. ಇವು ವಿದ್ಯಾರ್ಥಿಗಳ ಜೊತೆಗೆ ನೇರವಾಗಿ ಸಂಪರ್ಕ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇವು ಕ್ಲಾಸ್ ರೂಂನಲ್ಲಿ ಸಹಾಯಕ ಶಿಕ್ಷಕಿಯರಂತೆ ಕಾರ್ಯ ನಿರ್ವಹಿಸಲಿವೆ.
ಇವು ನೇರವಾಗಿ ಕಲಿಕೆಗೆ ಸಹಾಯ ಮಾಡಲಿವುದಲ್ಲದೆ, ವಿದ್ಯಾರ್ಥಿಗಳ ಉಚ್ಛಾರಣೆಯನ್ನು ಕೂಡ ಸರಿಪಡಿಸಲಿವೆ. ಇದರಿಂದ ಮಕ್ಕಳ ಇಂಗ್ಲಿಷ್ ಕಲಿಕೆಗೆ ಸಾಕಷ್ಟು ನೆರವು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಂಗ್ಲಿಷ್ ಟ್ಯೂಟರ್ ರೋಬೋಟ್ ಅನ್ನು ಪರೀಕ್ಷಾರ್ಥ ಪ್ರಯೋಗದಲ್ಲಿ ಇದರ ಸಾಮರ್ಥ್ಯ ಉತ್ತಮವಾಗಿದ್ದರೆ, ಈ ರೋಬೋಟ್ ಅನ್ನು ಮತ್ತಷ್ಟು ಶಾಲೆಗಳಿಗೆ ವಿಸ್ತರಿಸುವ ಆಲೋಚನೆ ಇದೆ. ಇದರ ಜೊತೆಗೆ ವಿದೇಶಿ ವಿದ್ಯಾರ್ಥಿಗಳ ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳ ಮುಖಾಮುಖಿಯೇತರ ಸಂಭಾಷಣೆಗೆ ಇಂಗ್ಲಿಷ್ ಕೇಳುವಿಕೆ ಮತ್ತು ಮಾತನಾಡುವ ವಾಯ್ಸ್ ಚಾಟ್ಬಾಟ್ ಅನ್ನು ವಿಸ್ತರಿಸಲಿದೆ.
ಚಾಟ್ಬಾಟ್ ಆಪ್ ಅನ್ನು ವೈಯಕ್ತಿಕ ಮೊಬೈಲ್ ಅಥವಾ ಡೆಸ್ಕ್ಟಾಪ್ನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಇದರ ಮೂಲಕ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಹನದಲ್ಲಿ ತೊಡಗಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಆಲ್ಟ್ಮ್ಯಾನ್ ವಜಾಕ್ಕೆ ಕಾರಣವಾಗಿತ್ತಾ ಓಪನ್ ಎಐನ ರಹಸ್ಯ ಪ್ರಾಜೆಕ್ಟ್ 'ಕ್ಯೂ-ಸ್ಟಾರ್'?