ನವದೆಹಲಿ: ಜಗತ್ತಿನ ಹಲವೆಡೆ ಇಂದು ಮುಂಜಾವು ಭೂಕಂಪನವಾಗಿದೆ. ಪಾಕಿಸ್ತಾನ, ಚೀನಾ ಮತ್ತು ಪಪುವಾ ನ್ಯೂಗಿನಿಯಾದಲ್ಲಿ ಭುವಿಯೊಡಲು ಕಂಪಿಸಿದ್ದು, ಮನೆಯಲ್ಲಿ ನಿದ್ರಿಸುತ್ತಿದ್ದ ಜನರು ಅರೆಕ್ಷಣ ಭಯಗೊಂಡರು. ಕಂಪನದ ಅನುಭವವಾದ ತಕ್ಷಣ ಜನರು ಮನೆಯಿಂದ ಹೊರಗೋಡಿ ಬೀದಿಗೆ ಬಂದಿದ್ದರು. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಮಾಹಿತಿ ಇಲ್ಲ.
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮುಂಜಾನೆ 03:38ರ ಹೊತ್ತಿಗೆ ಪಾಕಿಸ್ತಾನದಲ್ಲಿ ಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿತ್ತು. 03:45 ಗಂಟೆಗೆ ಚೀನಾದ ಜಿಜಾಂಗ್‌ನಲ್ಲಿ 5.0 ತೀವ್ರತೆಯಲ್ಲಿ ಕಂಪನ ಸಂಭವಿಸಿದೆ. ಇದೇ ಸಮಯದಲ್ಲಿ, ಪಪುವಾ ನ್ಯೂಗಿನಿಯಾದ ಉತ್ತರ ಕರಾವಳಿಯಲ್ಲಿ 03:16ಕ್ಕೆ 6.5 ತೀವ್ರತೆಯ ಪ್ರಬಲ ಭೂಕಂಪನವಾಗಿದೆ.
- ಭೂಕಂಪ ಸಂಭವಿಸಿದಾಗ ಏನು ಮಾಡಬೇಕು?
- ನೀವು ಕಟ್ಟಡದ ಒಳಗಿದ್ದರೆ ನೆಲದ ಮೇಲೆ ಕುಳಿತು ಕೆಲವು ಗಟ್ಟಿಯಾದ ಪೀಠೋಪಕರಣಗಳ ಕೆಳಗೆ ಅವಿತುಕೊಳ್ಳಿ. ಟೇಬಲ್ ಇಲ್ಲದಿದ್ದರೆ ನಿಮ್ಮ ಕೈಗಳಿಂದ ಮುಖ ಮತ್ತು ತಲೆ ಮುಚ್ಚಿಕೊಂಡು ಕೋಣೆಯ ಮೂಲೆಯೊಂದರಲ್ಲಿ ರಕ್ಷಣೆ ಪಡೆಯಿರಿ.
- ಕಟ್ಟಡದ ಹೊರಗಿದ್ದರೆ, ಕಟ್ಟಡ, ಮರ, ಕಂಬ ಮತ್ತು ತಂತಿಗಳಿಂದ ದೂರವಿರಿ.
- ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ, ಆದಷ್ಟು ಬೇಗ ವಾಹನವನ್ನು ನಿಲ್ಲಿಸಿ ಮತ್ತು ವಾಹನದೊಳಗೆ ಕುಳಿತುಕೊಳ್ಳಿ.
- ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದರೆ ಬೆಂಕಿಕಡ್ಡಿ ಹಚ್ಚಬೇಡಿ. ಪೈಪ್ ಅಥವಾ ಗೋಡೆಗೆ ಶಬ್ಧ ಬರುವ ರೀತಿಯಲ್ಲಿ ಬಾರಿಸಿ, ಇದರಿಂದ ರಕ್ಷಣಾ ಕಾರ್ಯಕರ್ತರಿಗೆ ನಿಮ್ಮನ್ನು ಹುಡುಕುವುದು ಸುಲಭವಾಗುತ್ತದೆ. ಬಾಯಿಯಿಂದ ಶಬ್ದ ಮಾಡುವುದರಿಂದ ನಿಮ್ಮ ಉಸಿರಾಟವನ್ನು ಧೂಳು ಮತ್ತು ಇತರೆ ವಸ್ತುಗಳು ಆವರಿಸಿಕೊಂಡು ಉಸಿರುಗಟ್ಟಿಸಬಹುದು.
- ಮನೆಯಲ್ಲಿ ಯಾವಾಗಲೂ ವಿಪತ್ತು ಪರಿಹಾರ ಕಿಟ್ ಸಿದ್ಧವಾಗಿಡಿ.
ಇದನ್ನೂ ಓದಿ: Earthquake shocks: ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ನಡುಗಿದ ಭೂಮಿ.. ಮನೆ ಬಿಟ್ಟು ಓಡಿ ಬಂದ ಜನರು