ಮನಿಲಾ (ಫಿಲಿಪ್ಪಿನ್ಸ್ ) : ಮಧ್ಯ ಫಿಲಿಪ್ಪಿನ್ಸ್ ಪ್ರಾಂತ್ಯದಲ್ಲಿ ಗುರುವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಮಧ್ಯರಾತ್ರಿಯಲ್ಲಿ ಜನ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಕಾರಣದಿಂದ ಹಲವಾರು ರೋಗಿಗಳನ್ನು ಆಸ್ಪತ್ರೆಗಳಿಂದ ಸ್ಥಳಾಂತರಿಸಬೇಕಾಯಿತು. ಭೂಕಂಪದಿಂದ ಸರ್ಕಾರಿ ಕಚೇರಿ ಕಟ್ಟಡವೊಂದಕ್ಕೆ ಮತ್ತು ವ್ಯಾಪಾರ ಮಳಿಗೆಗಳಿಗೆ ಸಣ್ಣ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಸ್ಬೇಟ್ ಪ್ರಾಂತ್ಯದ ಕರಾವಳಿ ಪಟ್ಟಣವಾದ ಬಟುವಾನ್‌ನ ಪಶ್ಚಿಮಕ್ಕೆ 11 ಕಿಲೋಮೀಟರ್ (6.8 ಮೈಲುಗಳು) ದೂರದಲ್ಲಿ ಮತ್ತು ಸ್ಥಳೀಯ ಫಾಲ್ಟ್ಲೈನ್ನಿಂದ 10 ಕಿಲೋಮೀಟರ್ (6 ಮೈಲಿಗಳು) ಆಳದಲ್ಲಿ ಸಂಭವಿಸಿದ 6 ತೀವ್ರತೆಯ ಭೂಕಂಪದಿಂದ ಯಾವುದೇ ಗಾಯ ಅಥವಾ ಹೆಚ್ಚಿನ ಹಾನಿ ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ. ಮಧ್ಯರಾತ್ರಿಯ ನಂತರ ಸುಮಾರು ಎರಡು ಗಂಟೆಗಳ ನಂತರ ಭೂಕಂಪ ಸಂಭವಿಸಿದೆ ಎಂದು ಮಾಸ್ಬೇಟ್ ಪ್ರಾಂತೀಯ ವಿಪತ್ತು ನಿಯಂತ್ರಣ ಇಲಾಖೆ ಅಧಿಕಾರಿ ಅಡೋನಿಸ್ ದಿಲಾವ್ ಹೇಳಿದ್ದಾರೆ.
ಸ್ಥಳೀಯರು ಹೇಳಿದ್ದಿಷ್ಟು: ಮೊದಲ ಕಂಪನವು ನಿಜವಾಗಿಯೂ ಪ್ರಬಲವಾಗಿತ್ತು ಮತ್ತು ನಂತರದ ಅಲುಗಾಡುವಿಕೆಯಿಂದ ನನಗೆ ಎಚ್ಚರವಾಯಿತು ಎಂದು ರೆಡ್ ಕ್ರಾಸ್ ಅಧಿಕಾರಿ ಎಂಜೆ ಆಕ್ಸೆಮರ್ ಮ್ಯಾಸ್ಬೇಟ್ ನಗರದ ಪ್ರಾಂತೀಯ ರಾಜಧಾನಿಯಿಂದ ದೂರವಾಣಿ ಮೂಲಕ ಮಾಧ್ಯಮಗಳಿಗೆ ತಿಳಿಸಿದರು. ನೆಲದಿಂದ ಭಾರಿ ಸದ್ದು ಬರುತ್ತಿರುವುದು ನಮಗೆ ಕೇಳಿಸುತ್ತಿತ್ತು. ಮ್ಯಾಸ್ಬೇಟ್ ಪ್ರಾಂತೀಯ ಆಸ್ಪತ್ರೆಯಿಂದ ಹಲವಾರು ರೋಗಿಗಳನ್ನು ಸ್ಥಳಾಂತರಿಸಲಾಯಿತು. ಭೂಕಂಪದಿಂದ ಆಸ್ಪತ್ರೆಯ ಮೂರಂತಸ್ತಿನ ಕಟ್ಟಡದಲ್ಲಿ ಸಣ್ಣ ಬಿರುಕುಗಳಾಗಿವೆ. ಕಂಪನ ನಿಂತ ಬಳಿಕ ರೋಗಿಗಳನ್ನು ಮತ್ತೆ ಆಸ್ಪತ್ರೆಗೆ ಕರೆತರಲಾಯಿತು. ಮ್ಯಾಸ್ಬೇಟ್ ನಗರದಲ್ಲಿನ ಸಣ್ಣ ಸರ್ಕಾರಿ ಕಚೇರಿ ಕಟ್ಟಡದ ಮೇಲ್ಛಾವಣಿಯ ಒಂದು ಭಾಗ ಹಾನಿಯಾಗಿದೆ ಎಂದು ದಿಲಾವ್ ಹೇಳಿದರು.
ಭೂಕಂಪದ ಕಾರಣದಿಂದ ಮ್ಯಾಸ್ಬೇಟ್ ಮತ್ತು ಹತ್ತಿರದ ಟಿಕಾವೊ ದ್ವೀಪದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡು ಕತ್ತಲಾವರಿಸಿತು. ಕೆಲ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ. ಸ್ಥಳೀಯ ಅಧಿಕಾರಿಗಳಿಂದ ಹಾನಿಯ ಮೌಲ್ಯಮಾಪನ ನಡೆಯುತ್ತಿದೆ. ಫಿಲಿಪ್ಪಿನ್ಸ್ ದ್ವೀಪವು ಪೆಸಿಫಿಕ್ ರಿಂಗ್ ಆಫ್ ಫೈರ್‌ನ ಉದ್ದಕ್ಕೂ ಹರಡಿಕೊಂಡಿದೆ. ಇದು ಪೆಸಿಫಿಕ್ ಮಹಾಸಾಗರದ ಸುತ್ತಲಿನ ದೋಷಗಳ ಪ್ರದೇಶವಾಗಿದ್ದು, ಇಲ್ಲಿ ಪ್ರಪಂಚದ ಹೆಚ್ಚಿನ ಭೂಕಂಪಗಳು ಸಂಭವಿಸುತ್ತವೆ. ಪ್ರತಿ ವರ್ಷ ಈ ದ್ವೀಪಕ್ಕೆ ಸುಮಾರು 20 ಚಂಡಮಾರುತಗಳು ಮತ್ತು ಉಷ್ಣವಲಯದ ಬಿರುಗಾಳಿಗಳು ಅಪ್ಪಳಿಸುತ್ತವೆ. ಇದು ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. 1990 ರಲ್ಲಿ ಉತ್ತರ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಸುಮಾರು 2,000 ಜನ ಮೃತಪಟ್ಟಿದ್ದರು.
ಟರ್ಕಿ ಹಾಗೂ ಸಿರಿಯಾ ಭೂಕಂಪದಲ್ಲಿ ಮೃತರ ಸಂಖ್ಯೆ ಏರಿಕೆ: ಟರ್ಕಿ ಮತ್ತು ಸಿರಿಯಾದಲ್ಲಿ ಭಾರೀ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 28,192 ಕ್ಕೆ ತಲುಪಿದೆ. ಟರ್ಕಿಯಲ್ಲಿ 24,617 ಜನ ಸಾವಿಗೀಡಾಗಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಹೇಳಿದ್ದಾರೆ. ಸಿರಿಯಾದ ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 2,167 ಜನ ಸೇರಿದಂತೆ ಒಟ್ಟು 3,575 ಜನ ಸಾವಿಗೀಡಾಗಿದ್ದಾರೆ ಎಂದು ವೈಟ್ ಹೆಲ್ಮೆಟ್ಸ್ ನಾಗರಿಕ ರಕ್ಷಣಾ ಗುಂಪು ಹೇಳಿದೆ.
ಇದನ್ನೂ ಓದಿ: ಟರ್ಕಿ ಭೀಕರ ಭೂಕಂಪದ ನಡುವೆಯೂ ನವಜಾತ ಶಿಶುಗಳ ರಕ್ಷಿಸಿದ ನರ್ಸ್ಗಳು.. ವಿಡಿಯೋ