ಢಾಕಾ, ಬಾಂಗ್ಲಾದೇಶ: ಮ್ಯಾನ್ಮಾರ್‌ನ ಪಶ್ಚಿಮ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ. ದೊಡ್ಡ ಪ್ರಮಾಣದ ಪ್ರವಾಹಕ್ಕೆ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳಿಗೆ ಭಾರಿ ಹಾನಿಯಾಗಿದೆ. ಸುಮಾರು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸಾವಿನ ಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇನ್ನು ಪರಿಹಾರ ಕಾರ್ಯ ಭರದಿಂದ ಸಾಗಿದೆ.
ಮೋಚಾ ಚಂಡಮಾರುತ್ತಕ್ಕೆ ಜನರು ತತ್ತರಿಸಿದ್ದಾರೆ. ಗಂಟೆಗೆ 209 ಕಿ.ಮೀ. ಬಲವಾದ ಗಾಳಿ ಬೀಸುತ್ತಿದ್ದು, ಸುಮಾರು 700 ಜನರು ಗಾಯಗೊಂಡಿದ್ದಾರೆ. ಸುಮಾರು 10 ಒಳನಾಡು ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗಿದೆ. ಭಾನುವಾರ ಮಧ್ಯಾಹ್ನ ರಖೈನ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದೆ. ಸೋಮವಾರವೂ ಜಲಾವೃತಗೊಂಡ ಪ್ರದೇಶಗಳಲ್ಲಿ ಐದು ಅಡಿಯಷ್ಟು ನೀರು ನಿಂತಿತ್ತು. ರಾಖೈನ್ ರಾಜ್ಯದ 17 ಟೌನ್‌ಶಿಪ್‌ಗಳು ದುರಂತದಿಂದ ಪ್ರಭಾವಿತವಾಗಿವೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
ಸಿಟ್ವೆ, ಕ್ಯೌಕ್ಪಿಯು ಮತ್ತು ಗ್ವಾ ಪಟ್ಟಣಗಳಲ್ಲಿನ ಮನೆಗಳು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ಸೆಲ್ ಫೋನ್ ಟವರ್‌ಗಳು, ದೋಣಿಗಳು ಮತ್ತು ಲ್ಯಾಂಪ್‌ಪೋಸ್ಟ್‌ಗಳಿಗೆ ಚಂಡಮಾರುತ ಹಾನಿಯಾಗಿದೆ.3,00,000 ಜನಸಂಖ್ಯೆಯನ್ನು ಹೊಂದಿರುವ ಸಿಟ್ವೆಯಲ್ಲಿ 4,000 ಕ್ಕೂ ಹೆಚ್ಚು ಜನರನ್ನು ಬೇರೆ ಪಟ್ಟಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಮಾಹಿತಿ ಕಚೇರಿ ತಿಳಿಸಿದೆ.
ಮೋಚಾ ಚಂಡಮಾರುತದಿಂದ ತೀವ್ರ ಪರಿಣಾಮ ಬೀರುವ ನಿರೀಕ್ಷೆಯಲ್ಲಿದ್ದ ಬಾಂಗ್ಲಾದೇಶದ ಕಾಕ್ಸ್ ಬಜಾರ್ ದುರಂತದ ಹಿಡಿತದಿಂದ ಪಾರಾಗಿದೆ. ಸೇಂಟ್ ಮಾರ್ಟಿನ್ ದ್ವೀಪದಲ್ಲಿ ಒಂದು ಡಜನ್ ಜನರು ಗಾಯಗೊಂಡಿದ್ದು, 300 ಮನೆಗಳಿಗೆ ಹಾನಿಯಾಗಿದೆ.
ಚಂಡಮಾರುತವು ಮೊದಲು ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪದ ಮೂಲಕ ಹಾದುಹೋಯಿತು. ಚಂಡಮಾರುತ ಪ್ರಭಾವಕ್ಕೆ ಅಲ್ಲಲ್ಲಿ ಹಾನಿ ಮತ್ತು ಸಾವುನೋವುಗಳನ್ನು ಸಂಭವಿಸಿದ್ದವು. ಹಿಂದಿನ ದಿನ ಬಲವಾದ ಗಾಳಿಯಿಂದಾಗಿ ಹಲವಾರು ಮೊಬೈಲ್ ಟವರ್‌ಗಳನ್ನು ನೆಲ್ಲಕ್ಕುರುಳಿ ಬಿದ್ದಿದ್ದಾವೆ. ಹೀಗಾಗಿ ಹೆಚ್ಚಿನ ಪ್ರದೇಶದ ಸಂವಹನ ಸಂಪರ್ಕಗಳನ್ನು ಕಡಿತಗೊಂಡಿವೆ.
ಮಿಜೋರಾಂನಲ್ಲಿ 236 ಮನೆಗಳಿಗೆ ಹಾನಿ: ಮಿಜೋರಾಂನಲ್ಲಿ ಎಂಟು ನಿರಾಶ್ರಿತರ ಶಿಬಿರಗಳು ಸೇರಿದಂತೆ 236 ಮನೆಗಳಿಗೆ ಮೋಚಾ ಚಂಡಮಾರುತ ಹಾನಿಯಾಗಿದೆ. ಈ ಪೈಕಿ 27 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 127 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಉಳಿದವುಗಳಿಗೆ ಸ್ವಲ್ಪ ಹಾನಿಯಾಗಿದೆ. 50 ಗ್ರಾಮಗಳಿಗೆ ಸೇರಿದ 5,749 ಜನರು ತೀವ್ರ ಗಾಳಿಗೆ ತತ್ತರಿಸಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಮಿಜೋರಾಂ ಅಧಿಕಾರಿಗಳು ಸೋಮವಾರ ಇದನ್ನು ಬಹಿರಂಗಪಡಿಸಿದ್ದಾರೆ.
ಓದಿ: ಮುಂದಿನ 2 ದಿನ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ರಾಜ್ಯದಲ್ಲಿ ಇನ್ನು ಎರಡು ದಿನ ಮಳೆ: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ 2 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಮುಂದಿನ 2 ದಿನ ಗುಡುಗು ಸಹಿತ ಮಳೆಯಾಗಲಿದೆ ಎಂದಿದೆ. ನಿನ್ನೆ ಪುತ್ತೂರು, ಕುಂದಾಪುರ, ಮಾಣಿ, ಕಾರ್ಕಳ, ಭಾಗಮಂಡಲ, ಕೋಟ, ಪಣಂಬೂರು, ಹುಣಸೂರು, ತುಮಕೂರಿನಲ್ಲಿ ಮಳೆಯಾಗಿದೆ.