ಮೇರಿಲ್ಯಾಂಡ್, ಅಮೆರಿಕ: ಮನೆಯೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ (Maryland fatal shooting) ಮೂವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್‌ನ ರಾಜಧಾನಿ ಅನ್ನಾಪೊಲಿಸ್ನಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಕೆಲವೊಂದು ವಿಷಯಗಳು ಬಹಿರಂಗಪಡಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ತಂದೆ-ಮಗ ಸಾವು : ಪಾರ್ಟಿಯೊಂದರಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ನೆರೆಹೊರೆಯಲ್ಲಿ ನಡೆದ ವಿವಾದದಲ್ಲಿ ತಂದೆ ಮತ್ತು ಮಗ ಸೇರಿದಂತೆ ಮೂವರನ್ನು ಹತ್ಯೆ ಮಾಡಿರುವ ಘಟನೆ ಮುನ್ನೆಲೆಗೆ ಬಂದಿದೆ. ಈ ಗುಂಡಿನ ದಾಳಿಯಲ್ಲಿ ಇತರ ಮೂವರು ಗಾಯಗೊಂಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ನಡೆದ ಗುಂಡಿನ ದಾಳಿಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ಅನ್ನಾಪೊಲಿಸ್ ನಿವಾಸಿ 43 ವರ್ಷದ ಚಾರ್ಲ್ಸ್ ರಾಬರ್ಟ್ ಸ್ಮಿತ್ ಎಂದು ಗುರುತಿಸಲಾಗಿದೆ. ಆರೋಪಿ ಮೇಲೆ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ ಇತರ ಅಪರಾಧಗಳ ಆರೋಪಗಳನ್ನು ಹೊರಿಸಲಾಗಿದೆ. ಸ್ಮಿತ್ ಭಾನುವಾರ ರಾತ್ರಿ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಅರೆ-ಸ್ವಯಂಚಾಲಿತ ಕೈಬಂದೂಕು ಮತ್ತು ಲಾಂಗ್ ಗನ್ ಎರಡನ್ನೂ ವಶಪಡಿಸಿಕೊಂಡಿದ್ದಾರೆ ಎಂದು ಅನ್ನಾಪೊಲಿಸ್ ಪೊಲೀಸ್ ಮುಖ್ಯಸ್ಥ ಎಡ್ವರ್ಡ್ ಜಾಕ್ಸನ್ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತರನ್ನು ಒಡೆಂಟನ್ ನಿವಾಸಿ 55 ವರ್ಷದ ನಿಕೋಲಸ್ ಮಿರೆಲ್ಸ್, ಅನ್ನಾಪೊಲಿಸ್ ನಿವಾಸಿಗಳಾದ 27 ವರ್ಷದ ಮಾರಿಯೋ ಆಂಟೋನಿಯೊ ಮಿರೆಲೆಸ್ ರೂಯಿಜ್ ಮತ್ತು 25 ವರ್ಷದ ಕ್ರಿಶ್ಚಿಯನ್ ಮರ್ಲಾನ್ ಸೆಗೋವಿಯಾ ಎಂದು ಗುರುತಿಸಲಾಗಿದೆ. ಮನೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಭಾನುವಾರ ಸಂಜೆ 7.50ರ ಸುಮಾರಿಗೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾಗ ಒಟ್ಟು ಆರು ಜನರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜಾಕ್ಸನ್ ಹೇಳಿದ್ದಾರೆ.
ಪಾರ್ಟಿಯೊಂದರ ವೇಳೆ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದೆ. ಸ್ಮಿತ್ ಅವರ ತಾಯಿ ಶೆರ್ಲಿ ಸ್ಮಿತ್ ಮತ್ತು ಮಿರೆಲ್ಸ್ ಸ್ಮಿತ್ಸ್ ನಡುವೆ ವಾಗ್ವಾದ ನಡೆಯಿತು. ಇವರ ಜಗಳ ವಿಕೋಪಕ್ಕೆ ತಿರುಗಿದ ನಂತರ, ಸ್ಮಿತ್ ಗನ್ ಅನ್ನು ಹೊರತೆಗೆದು ರೂಯಿಜ್ ಮತ್ತು ಸೆಗೋವಿಯಾ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದರು. ಆಗ ಇತರರು ಪ್ರತಿಕ್ರಿಯಿಸಿದಾಗ ಸ್ಮಿತ್ ಮತ್ತೆ ಗುಂಡಿನ ದಾಳಿ ಮುಂದುವರಿಸಿದರು.
ಈ ಸಮಯದಲ್ಲಿ ಎಲ್ಲರೂ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಹೋದರು. ಈ ಭರದಲ್ಲಿ ಸ್ಮಿತ್ ಹಾರಿಸಿದ ಗುಂಡು ಮಾರಿಯೋ ಮಿರೆಲ್ಸ್ ತಂದೆ ನಿಕೋಲಸ್ ಮಿರೆಲೆಸ್ಗೆ ತಗುಲಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಅದೇ ವೇಳೆ, ಆತ ಇತರ ಮೂವರಿಗೆ ಗುಂಡು ಹಾರಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಕುರಿತು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಓದಿ: Manipur violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಶಂಕಿತ ಕುಕಿ ಗುಂಡಿನ ದಾಳಿಯಿಂದ 9 ಮಂದಿಗೆ ಗಾಯ