ವಿಶ್ವಸಂಸ್ಥೆ: ಉತ್ತರ ಗಾಜಾದಲ್ಲಿ ವಾಸಿಸುತ್ತಿರುವ ಸುಮಾರು 1.1 ಮಿಲಿಯನ್ (11 ಲಕ್ಷ) ಜನರನ್ನು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಿಸಬೇಕೆಂದು ಇಸ್ರೇಲ್ ಸೇನೆಯು ವಿಶ್ವಸಂಸ್ಥೆಗೆ ತಿಳಿಸಿದೆ ಎಂದು ವಿಶ್ವ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಉತ್ತರ ಗಾಜಾದಲ್ಲಿನ ಈ ಪ್ರದೇಶ ಹಮಾಸ್ ನಿಯಂತ್ರಿತ ಎನ್ಕ್ಲೇವ್ ಆಗಿದ್ದು, ಇದರಲ್ಲಿನ ಅರ್ಧದಷ್ಟು ಜನಸಂಖ್ಯೆಯನ್ನು ದಕ್ಷಿಣ ಗಾಜಾಕ್ಕೆ ಸ್ಥಳಾಂತರಿಸಲು ಇಸ್ರೇಲ್ ತಿಳಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಅವರ ಪ್ರಕಾರ, "ವಾಡಿ ಗಾಜಾದ ಉತ್ತರದಲ್ಲಿನ ಸಂಪೂರ್ಣ ಜನಸಂಖ್ಯೆಯು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳಬೇಕು" ಎಂದು ಇಸ್ರೇಲ್ ಮಿಲಿಟರಿ ಗುರುವಾರ ಮಧ್ಯರಾತ್ರಿ ವಿಶ್ವಸಂಸ್ಥೆಗೆ ತಿಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
"ಅಂದರೆ ಸರಿಸುಮಾರು 1.1 ಮಿಲಿಯನ್ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಈ ಆದೇಶವು ಎಲ್ಲ ವಿಶ್ವಸಂಸ್ಥೆ ಸಿಬ್ಬಂದಿ ಮತ್ತು ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳು ಸೇರಿದಂತೆ ವಿಶ್ವಸಂಸ್ಥೆಯ ಸೌಲಭ್ಯಗಳಲ್ಲಿ ಆಶ್ರಯ ಪಡೆದವರಿಗೆ ಅನ್ವಯಿಸುತ್ತದೆ" ಎಂದು ವಿಶ್ವ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಇಷ್ಟೊಂದು ಬೃಹತ್ ಸಂಖ್ಯೆಯ ಜನರನ್ನು ಸ್ಥಳಾಂತರಿಸುವುದು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಲಿದೆ ಮತ್ತು ಇಂಥದೊಂದು ಪ್ರಕ್ರಿಯೆ ಅಸಾಧ್ಯ ಎಂದು ಯುಎನ್ ಪರಿಗಣಿಸಿದೆ. ಇಸ್ರೇಲ್ ಇಂಥ ಆದೇಶ ನೀಡಿದ್ದರೆ ಅದನ್ನು ರದ್ದುಪಡಿಸಬೇಕೆಂದು ವಿಶ್ವಸಂಸ್ಥೆ ಇದೇ ವೇಳೆ ಮನವಿ ಮಾಡಿದೆ.
ತನ್ನ ಆದೇಶಕ್ಕೆ ವಿಶ್ವಸಂಸ್ಥೆ ನೀಡಿದ ಪ್ರತಿಕ್ರಿಯೆಯನ್ನು ಖಂಡಿಸಿದ ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್, ಇದು ಹಮಾಸ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಾಗಿದ್ದು, ಅಮಾಯಕ ನಾಗರಿಕರಿಗೆ ಉಂಟಾಗಬಹುದಾದ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಗಾಜಾ ನಿವಾಸಿಗಳಿಗೆ ಆರಂಭಿಕ ಎಚ್ಚರಿಕೆಯಾಗಿದೆ ಎಂದು ಹೇಳಿದ್ದಾರೆ.
"ಹಲವು ವರ್ಷಗಳಿಂದ ಹಮಾಸ್ ಶಸ್ತ್ರಾಸ್ತ್ರಗಳನ್ನು ಇಲ್ಲಿ ಸಂಗ್ರಹಿಸಿ ಇಡುತ್ತಿರುವ ಬಗ್ಗೆ ಮತ್ತು ಗಾಜಾ ಪಟ್ಟಿಯಲ್ಲಿನ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಬಳಸಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಡುತ್ತಿರುವ ಬಗ್ಗೆ ತಿಳಿದಿದ್ದರೂ ವಿಶ್ವಸಂಸ್ಥೆ ಕಣ್ಣುಮುಚ್ಚಿ ಕುಳಿತಿದೆ" ಎಂದು ಅವರು ಆರೋಪಿಸಿದರು.
"ಈಗ ಹಮಾಸ್ ಭಯೋತ್ಪಾದಕರಿಂದ ದಾಳಿಗೊಳಗಾದ ಇಸ್ರೇಲ್ ಪರವಾಗಿ ನಿಲ್ಲುವ ಬದಲು ವಿಶ್ವಸಂಸ್ಥೆ ಇಸ್ರೇಲ್ಗೆ ನೀತಿ ಬೋಧನೆ ಮಾಡುತ್ತಿದೆ. ಒತ್ತೆಯಾಳುಗಳನ್ನು ಹಿಂದಿರುಗಿಸುವುದು, ಹಮಾಸ್ ಅನ್ನು ಖಂಡಿಸುವುದು ಮತ್ತು ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್ನ ಹಕ್ಕನ್ನು ಬೆಂಬಲಿಸುವತ್ತ ವಿಶ್ವಸಂಸ್ಥೆ ಈಗ ಗಮನ ಹರಿಸುವುದು ಉತ್ತಮ" ಎಂದು ರಾಯಭಾರಿ ಹೇಳಿದರು. ಇಸ್ರೇಲ್ ಸೇನೆಯ ಪ್ರಕಾರ, ಕಳೆದ ಆರು ದಿನಗಳಲ್ಲಿ ಹಮಾಸ್ ನಿಯಂತ್ರಿತ ಎನ್ಕ್ಲೇವ್ ಮೇಲೆ 6,000 ಕ್ಕೂ ಹೆಚ್ಚು ವೈಮಾನಿಕ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : ಅ.21ರಂದು ಪಾಕಿಸ್ತಾನಕ್ಕೆ ಮರಳಲಿದ್ದಾರೆ ನವಾಜ್ ಷರೀಫ್; ಬುಕ್ ಆಗಿದೆ 'ಉಮೀದ್-ಎ-ಪಾಕಿಸ್ತಾನ್' ವಿಮಾನ