ಬೀಜಿಂಗ್: ತನ್ನ ನೀತಿಗಳನ್ನು ಪ್ರಬಲವಾಗಿ ಅನುಷ್ಠಾನಗೊಳಿಸದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ರನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ವಜಾ ಮಾಡಿದ್ದು, ಅವರ ಜಾಗಕ್ಕೆ ವಾಂಗ್ ಯಿ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಚೀನಾ ಸರ್ಕಾರದ ಈ ದಿಢೀರ್ ನಿರ್ಧಾರವು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಜವಾಬ್ದಾರಿಯಿಂದ ತೆರವು ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಆದರೆ, ಇದರೆ ಹಿಂದಿನ ಕಾರಣ ಬೇರೆಯೇ ಇದೆ ಎಂದು ಅನುಮಾನಿಸಲಾಗಿದೆ.
ಚೀನಾದಲ್ಲಿ ಮಾಧ್ಯಮ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಹೆಚ್ಚಿನ ಅವಕಾಶ ಇಲ್ಲದ ಕಾರಣ ವಿದೇಶಾಂಗ ಸಚಿವರ ತೆರವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಸಚಿವಾಲಯವೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನಾದ ಆಕ್ರಮಣಕಾರಿ ವಿದೇಶಾಂಗ ನೀತಿಯ ವಿರುದ್ಧ ಹಲವು ದೇಶಗಳು ಟೀಕಿಸುತ್ತಿರುವ ನಡುವೆ ವಿದೇಶಾಂಗ ಸಚಿವರ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ.
ತಿಂಗಳಿಂದ ಕಿನ್ ಗ್ಯಾಂಗ್ ನಾಪತ್ತೆ; ವಿದೇಶಾಂಗ ಸಚಿವರಾಗಿದ್ದ ಕಿನ್ ಗ್ಯಾಂಗ್ ತಿಂಗಳಿನಿಂದ ನಾಪತ್ತೆಯಾಗಿದ್ದರು. ಅವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಅವರು ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರನ್ನು ಹುದ್ದೆಯಿಂದಲೇ ಕೈಬಿಡಲಾಗಿದೆ. ನೂತನ ವಿದೇಶಾಂಗ ಸಚಿವರನ್ನಾಗಿ ಕ್ಸಿ ಜಿನ್ಪಿಂಗ್ ಆಪ್ತರಾದ ವಾಂಗ್ ಯಿ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಶೃಂಗಸಭೆಯನ್ನು ಕಿನ್ ಗ್ಯಾಂಗ್ ತಪ್ಪಿಸಿಕೊಂಡಿದ್ದರು. ಈ ಬೆಳವಣಿಗೆ ನಂತರ ವಿದೇಶಾಂಗ ಸಚಿವಾಲಯ ಆರೋಗ್ಯ ಕಾರಣಗಳಿಗಾಗಿ ಅವರು ಶೃಂಗಸಭೆಗೆ ಗೈರಾಗಿದ್ದಾರೆ ಎಂದು ತಿಳಿಸಿತ್ತು. ಆದರೆ, ಯಾವುದೇ ವಿವರವಾದ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಈಗಲೂ ಕಿನ್ ಗ್ಯಾಂಗ್ ಅವರನ್ನು ಹುದ್ದೆಯಿಂದ ಕೈಬಿಟ್ಟ ಬಗ್ಗೆ ವಿದೇಶಾಂಗ ಸಚಿವಾಲಯ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ, ತನ್ನ ಪ್ರತಿಸ್ಪರ್ಧಿಯಾದ ಅಮೆರಿಕದ ಜೊತೆ ಪೈಪೋಟಿ ನಡೆಸುತ್ತಿರುವ ನಡುವೆಯೇ ಸಚಿವರ ಬದಲಾವಣೆ ಮಾಡಿದ್ದು ಮಹತ್ವ ಪಡೆದುಕೊಂಡಿದೆ. ಅಮೆರಿಕದ ಜೊತೆಗೆ ಚೀನಾ ಈಗಾಗಲೇ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಉಕ್ರೇನ್ ಯುದ್ಧ, ತೈವಾನ್ ಸಂಘರ್ಷದ ವಿಚಾರದಲ್ಲಿ ಎರಡೂ ರಾಷ್ಟ್ರಗಳು ಭಿನ್ನ ಅಭಿಪ್ರಾಯವನ್ನು ಹೊಂದಿವೆ. ಇದು ಉಭಯ ರಾಷ್ಟ್ರಗಳ ಮಧ್ಯೆ ಬಿರುಕು ಮೂಡಿಸಿದೆ.
ಇದನ್ನೂ ಓದಿ: ಸ್ಪೇಸ್‌ಎಕ್ಸ್ ರಾಕೆಟ್ನಿಂದ ಅಯಾನುಗೋಳದಲ್ಲಿ ತಾತ್ಕಾಲಿಕ ರಂಧ್ರ ಸೃಷ್ಟಿ: ಬಾಹ್ಯಾಕಾಶ ಭೌತಶಾಸ್ತ್ರಜ್ಞ