ಬೀಜಿಂಗ್(ಚೀನಾ): ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳು ಮುಂದುವರೆದಿದೆ. ಅದರಲ್ಲೂ ಚೀನಾದ ಪ್ರಜೆಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು, ಮಂಗಳವಾರದ ಕರಾಚಿ ಸ್ಫೋಟದಲ್ಲಿ ಮೂವರು ಚೀನಿಯರ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ಮೂಲ ಕಾರಣವನ್ನು ಕಂಡು ಹಿಡಿಯಬೇಕೆಂದು ಚೀನಾ ಪಾಕಿಸ್ತಾನವನ್ನು ಒತ್ತಾಯಿಸಿದೆ. ಪಾಕಿಸ್ತಾನದಲ್ಲಿ ತನ್ನ ಯೋಜನೆಗಳನ್ನು ಕಾಪಾಡಿಕೊಳ್ಳಲು ಮತ್ತು ಪಾಕ್ನಲ್ಲಿರುವ ತನ್ನ ಸಿಬ್ಬಂದಿಯನ್ನು ರಕ್ಷಿಸಲು ಪಾಕ್ ಸರ್ಕಾರ ಹೆಚ್ಚಿನ ಪ್ರಯತ್ನ ಪಡಬೇಕು ಎಂದು ಚೀನಾ ಆಗ್ರಹಿಸಿದೆ.
ಕರಾಚಿಯಲ್ಲಿರುವ ಪಾಕಿಸ್ತಾನ್ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಸಂಭವಿಸಿದ ಕಾರು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇದರಲ್ಲಿ ಮೂವರು ಚೀನಾ ಪ್ರಜೆಗಳೂ ಸೇರಿದ್ದರು. ಪಾಕಿಸ್ತಾನ್ ವಿಶ್ವವಿದ್ಯಾನಿಲಯದ ಚೀನಿ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿಯಲ್ಲಿದ್ದ ವ್ಯಾನ್‌ನಲ್ಲಿ ಈ ಸ್ಫೋಟ ಸಂಭವಿಸಿತ್ತು. ಈ ಬೆನ್ನಲ್ಲೇ ಚೀನಾದ ಸರ್ಕಾರಿ ಮಾಧ್ಯಮವು ಸ್ಫೋಟವನ್ನು ಖಂಡಿಸಿದ್ದು, ಚೀನಾ ಪ್ರಜೆಗಳ ಸುರಕ್ಷತೆಗಾಗಿ ಪಾಕಿಸ್ತಾನದ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಪಾಕಿಸ್ತಾನದಲ್ಲಿರುವ ಚೀನಾ ಸಂಸ್ಥೆಗಳು, ಯೋಜನೆಗಳು ಮತ್ತು ಸಿಬ್ಬಂದಿಯನ್ನು ಪಾಕಿಸ್ತಾನ ರಕ್ಷಿಸಬೇಕಿದೆ. ಚೀನಿಯರನ್ನು ನೋಯಿಸಲು ಪ್ರಯತ್ನಿಸುವವರು ತಮ್ಮ ವಿನಾಶವನ್ನು ತಾವೇ ಕಾಣುತ್ತಾರೆ ಎಂದು ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದೆ. ಆದರೂ ಈ ಘಟನೆಯ ಹೊಣೆ ಹೊತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಚೀನಾದ ಕಂಪನಿಗಳು ಮತ್ತು ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ನಡೆಸುವುದಾಗಿ ಪದೇ ಪದೆ ಬೆದರಿಕೆ ಹಾಕುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಇದಕ್ಕೂ ಮುನ್ನ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ 20180ರಲ್ಲಿ ಕರಾಚಿಯಲ್ಲಿರುವ ಚೀನಾ ಕಾನ್ಸುಲೇಟ್ ಮೇಲೆ ದಾಳಿ ಮಾಡಿತ್ತು. ನಂತರ ಆಗಸ್ಟ್ 2021ರಲ್ಲಿ ಗ್ವಾದರ್ ಬಂದರಿನ ಬಳಿ ಆತ್ಮಹತ್ಯಾ ದಾಳಿಯನ್ನು ನಡೆಸಿ, ಚೀನಾದ ಪ್ರಜೆಯನ್ನು ಗಾಯಗೊಳಿಸಿತ್ತು. ಈಗಲೂ ಕೂಡಾ ದಾಳಿಗಳು ಮುಂದುವರೆಯುತ್ತಿದ್ದು, ಚೀನಾಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತದಲ್ಲಿ ಹಣದುಬ್ಬರ ಹೆಚ್ಚಳ, ಕಡಿವಾಣಕ್ಕೆ ಕ್ರಮ ಅಗತ್ಯ : ಐಎಂಎಫ್