ಅಬುಜಾ (ನೈಜೀರಿಯಾ): ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯೊಂದು ಮುಳುಗಿ 76 ಜನರು ಪ್ರಾಣ ಕಳೆದುಕೊಂಡ ಭೀಕರ ದುರಂತ ನೈಜೀರಿಯಾದಲ್ಲಿ ಶುಕ್ರವಾರ ಸಂಭವಿಸಿದೆ. ಅನಾಂಬ್ರಾ ರಾಜ್ಯದಲ್ಲಿ 85 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಮುಳುಗಿತ್ತು. ಇದರಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿದೆ.
ಭೀಕರ ಘಟನೆಗೆ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ವಿಷಾದ ವ್ಯಕ್ತಪಡಿಸಿದ್ದು, ಉಳಿದವರಿಗಾಗಿ ರಕ್ಷಣಾ ಕಾರ್ಯ ತ್ವರಿತಗೊಳಿಸಲಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ದೋಣಿ ದುರಂತದಲ್ಲಿ ರಕ್ಷಿಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಜಲಮಾರ್ಗಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದಲ್ಲದೇ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು ಎಂದು ಅಧ್ಯಕ್ಷರು ಸೂಚಿಸಿದ್ದಾರೆ.
ಈ ದುರಂತ ಅಪಾರ ನೋವುಂಟು ಮಾಡಿದೆ. ದೋಣಿ ಅಪಘಾತದಲ್ಲಿ ಉಳಿದವರಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ನೈಜೀರಿಯಾ ಅಧ್ಯಕ್ಷರು ಕೋರಿದ್ದಾರೆ.