ಲಂಡನ್: ನಗರದಲ್ಲಿ ದೀಪಾವಳಿ ಹಬ್ಬದ ದಿನದಂದು ದುರ್ಘಟನೆಯೊಂದು ಸಂಭವಿಸಿದೆ. ಭಾರತೀಯ ಮೂಲದ ಕುಟುಂಬದ ಐವರು ದೀಪಾವಳಿ ಆಚರಿಸುತ್ತಿದ್ದ ವೇಳೆ ಬೆಂಕಿಗೆ ಆಹುತಿಯಾಗಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ದುರಂತದಲ್ಲಿ ಮತ್ತೊಬ್ಬರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತರ ಹೆಸರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯಸ್ಥ ಸೀನ್ ವಿಲ್ಸನ್, ಘಟನೆಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಮುನ್ನೆಚ್ಚರಿಕೆಯಿಂದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ರಾತ್ರಿ ಹೌನ್ಸ್ಲೋ ಪ್ರದೇಶದಲ್ಲಿನ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಕೂಡಲೇ ನಾವು ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಮೂಲಕ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಆದ್ರೆ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಹೋಗುವ ಹೊತ್ತಿಗೆ ಐದು ಜನರು ಸಾವನ್ನಪ್ಪಿದ್ದರು. ಈ ದುರ್ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಅವರೆಲ್ಲರನ್ನು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯ ಅಧೀಕ್ಷಕ ಸೀನ್ ವಿಲ್ಸನ್ ತಿಳಿಸಿದ್ದಾರೆ.
ಈ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಐವರ ಶವಗಳನ್ನು ಮನೆಯೊಳಗಿಂದ ಹೊರತೆಗೆಯಲಾಗಿದೆ. ಗಾಯಗೊಂಡಿರುವ ಆರನೇ ವ್ಯಕ್ತಿಯ ಗುರುತು ಸದ್ಯಕ್ಕೆ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರ ಬಂಧನ ಆಗಿಲ್ಲ.
ಇನ್ನು ಈ ಬೆಂಕಿ ಅವಘಡದ ಬಗ್ಗೆ ಮ್ಯಾಂಚೆಸ್ಟರ್‌ನ ಭಾರತೀಯ ಮೂಲದ ದಿಲೀಪ್ ಸಿಂಗ್ ಪ್ರತಿಕ್ರಿಯಿಸಿ, ನನ್ನ ಮಾವ, ಆತನ ಪತ್ನಿ, ಮೂವರು ಮಕ್ಕಳು ಮತ್ತು ಇಬ್ಬರು ಅತಿಥಿಗಳು ಮನೆಯಲ್ಲಿದ್ದರು. ಮಾಹಿತಿ ಸಿಕ್ಕ ತಕ್ಷಣ ಇಲ್ಲಿಗೆ ಬಂದಿದ್ದೇನೆ. ಘಟನೆ ಹೇಗೆ ಸಂಭವಿಸಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು. ಸಂತ್ರಸ್ತೆಯ ಕುಟುಂಬ ಇತ್ತೀಚೆಗೆ ಬೆಲ್ಜಿಯಂನಿಂದ ಲಂಡನ್‌ನಲ್ಲಿರುವ ಮನೆಗೆ ತೆರಳಿತ್ತು ಎಂದು ವರದಿಯಾಗಿದೆ.
ಓದಿ:ಬ್ರಿಟನ್ನ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ನೇಮಕ