ಮಾಲಿ(ಪಶ್ಚಿಮ ಆಫ್ರಿಕಾ): ಕೇಂದ್ರ ಮಾಲಿಯಲ್ಲಿ ಸ್ಫೋಟಕ ಸಾಧನ ಐಇಡಿಗೆ ಡಿಕ್ಕಿ ಹೊಡೆದ ಬಳಿಕ ಬಸ್ ಸ್ಫೋಟಗೊಂಡಿದ್ದು, ಸುಮಾರು 11 ಮಂದಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಕೇಂದ್ರ ಮಾಲಿಯಲ್ಲಿ ಗುರುವಾರ ಬೆಳಗ್ಗೆ ಬಸ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಿಹಾದಿ ಹಿಂಸಾಚಾರದ ಕೇಂದ್ರವೆಂದು ಕರೆಯಲ್ಪಡುವ ಮೋಪ್ತಿ ಪ್ರದೇಶದ ಬಂಡಿಯಾಗರಾ ಮತ್ತು ಗೌಂಡಕ ನಡುವಿನ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಸ್ಫೋಟಕ ಸಾಧನಕ್ಕೆ ಡಿಕ್ಕಿ ಹೊಡೆದಿದೆ. ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡ ಜಿಹಾದಿ ದಂಗೆಯೊಂದಿಗೆ ಮಾಲಿ ದೀರ್ಘಕಾಲ ಹೋರಾಡುತ್ತಿದೆ. ಇದರಿಂದಾಗಿ ಲಕ್ಷಾಂತರ ಸ್ಥಳೀಯರು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ ಎನ್ನಲಾಗ್ತಿದೆ.
ಗಣಿ ಮತ್ತು ಸುಧಾರಿತ ಸ್ಫೋಟಕ ಸಾಧನಗಳು (IEDs) ಜಿಹಾದಿಗಳ ಆಯ್ಕೆಯ ಆಯುಧಗಳಲ್ಲಿ ಸೇರಿವೆ. ಈ ಆಯುಧಗಳು ಪ್ರಭಾವದಿಂದ ಸಮೀಪ ಅಥವಾ ದೂರದಿಂದಲೇ ಸ್ಫೋಟಿಸಬಹುದಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.