ಸನಾ (ಯೆಮನ್): ಮಕ್ಕಳನ್ನು ಕೊಲೆಗೈದ ಮೂವರನ್ನು ಸಾರ್ವಜನಿಕ ಸ್ಥಳದಲ್ಲಿ ಹೊದಿಕೆ ಮೇಲೆ ಮಲಗಿಸಿ ಎಕೆ-47 ಗನ್ನಿಂದ ಫಾಸಿದಾರ ಶೂಟ್ ಮಾಡಿ ಹತ್ಯೆಗೈದಿರುವ ಘಟನೆ ಯೆಮನ್ ರಾಜಧಾನಿ ಸನಾದಲ್ಲಿ ನಡೆದಿದೆ.
ಅದೇ ಹೊದಿಕೆಯಿಂದ ಸುತ್ತಿ ಅವರ ಮೃತದೇಹಗಳನ್ನು ತೆಗೆದುಕೊಂಡು ಹೋಗಲಾಗಿದೆ. ಅಲಿ ಅಲ್-ನಾಮಿ (40), ಅಬ್ದುಲ್ಲಾ ಅಲ್-ಮಖಾಲಿ (38) ಮತ್ತು ಮೊಹಮ್ಮದ್ ಅರ್ಮಾನ್ (33) ಹತ್ಯೆಯಾದ ಕೊಲೆಗಾರರು. ಅಲಿ ಅಲ್-ನಾಮಿ, ಈತ 2019ರ ಜೂನ್‌ನಲ್ಲಿ ತನ್ನ 7,12 ಮತ್ತು14 ವರ್ಷದ ಹೆಣ್ಣು ಮಕ್ಕಳನ್ನು ಕತ್ತು ಹಿಸುಕಿ ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಸಾಯಿಸಿದ್ದ. ಅಬ್ದುಲ್ಲಾ ಅಲ್-ಮಖಾಲಿ ಹಾಗೂ ಮೊಹಮ್ಮದ್ ಅರ್ಮಾನ್ ಇವರು ಬಾಲಕನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘೋರ ಅಪರಾಧಕ್ಕೆ ಶಿಕ್ಷೆಗೊಳಗಾಗಿದ್ದಾರೆ.
ಈ ಕೊಲೆಗಾರರನ್ನು ಇರಾನ್ ಬೆಂಬಲಿತ ಹೂತಿ ಬಂಡುಕೋರರ ಎದುರೇ ಸೌದಿ ಒಕ್ಕೂಟದ ಸೈನಿಕರು ಗುಂಡಿಕ್ಕಿ ಹತೈಗೈದಿದ್ದಾರೆ. ಈ ಮೂಲಕ ಹೂತಿ ಬಂಡುಕೋರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
2014ರಲ್ಲಿ ಇರಾನ್ ಬೆಂಬಲಿತ ಬಂಡುಕೋರರು ಯೆಮನ್ ಮೇಲೆ ದಾಳಿ ನಡೆಸಿ, ರಾಜಧಾನಿ ಸನಾ ಸೇರಿದಂತೆ ಅನೇಕ ಪ್ರದೇಶಗಳನ್ನು ವಶಕ್ಕೆ ಪಡೆದು ಅಲ್ಲಿನ ಸೌದಿ ಬೆಂಬಲಿತ ಸರ್ಕಾರವನ್ನೇ ಕಿತ್ತೊಗೆದಿದ್ದಾರೆ. ಯೆಮನ್‌ನಲ್ಲಿ ಸರ್ಕಾರ ಮರುಸ್ಥಾಪಿಸಲು ಅಮೆರಿಕ ಹಾಗೂ ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟ ನೆರವಿಗೆ ಬಂದಿವೆ. ಅಂದಿನಿಂದಲೂ ಸೌದಿ ಒಕ್ಕೂಟದ ಸೈನಿಕರು ಹಾಗೂ ಹೂತಿ ಬಂಡುಕೋರರ ನಡುವೆ ಸಂಘಷರ್ಧ ನಡೆಯುತ್ತಲೇ ಇದೆ. ಈ ಯುದ್ಧವು ಸುಮಾರು 1,30,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಹೂತಿ ಬಂಡುಕೋರರು ಅಮಾನೀಯವಾಗಿ ಮಕ್ಕಳನ್ನು ಹತೈಗೈಯ್ಯುತ್ತಿದ್ದಾರೆ.
2018ರಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಕ್ಕಾಗಿ ಮೂವರು ಬಂಡುಕೋರರನ್ನು ಸಾರ್ವಜನಿಕವಾಗಿ ಹೊಡೆದುರುಳಿಸಿ, ಅವರ ದೇಹವನ್ನು ಕ್ರೇನ್‌ನಿಂದ ನೇತು ಹಾಕಲಾಗಿತ್ತು. ಯೆಮನ್‌ನಾದ್ಯಂತ 11 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ನೆರವು ಮತ್ತು ರಕ್ಷಣೆಯ ಅವಶ್ಯಕತೆಯಿದೆ ಎಂದು ಯೂನಿಸೆಫ್ ತಿಳಿಸಿದೆ.