ಜಿನೇವಾ: ಕೋವಿಡ್ ರೋಗಿಗಳ ಮೇಲೆ ಹೈಡ್ರೋಕ್ಲೊರೊಕ್ವಿನ್ (ಹೆಚ್‌ಸಿಕ್ಯು)ನ ಕ್ಲಿನಿಕಲ್ ಪ್ರಯೋಗ ನಿಲ್ಲಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಮೇ 22 ರಂದು ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಕೋವಿಡ್ ರೋಗಿಗಳ ಮೇಲೆ ಹೆಚ್‌ಸಿಕ್ಯೂ ಪರಿಣಾಮಗಳ ಕುರಿತು ಅಧ್ಯಯನ ವರದಿ ಪ್ರಕಟಿಸಿತ್ತು. ಈ ವರದಿಯ ಪ್ರಕಾರ ಹೈಡ್ರೋಕ್ಲೊರೊಕ್ವಿನ್ ಪ್ರಯೋಗ ಮಾಡಿದ ರೋಗಿಗಳು ಹೆಚ್ಚು ಸಂಖ್ಯೆಯಲ್ಲಿ ಮರಣ ಹೊಂದಿದ್ದಾರೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ತಿಳಿಸಿದರು.
ಹೀಗಾಗಿ ಮೇ 23 ರಂದು 10 ದೇಶಗಳನ್ನು ಪ್ರತಿನಿಧಿಸುವ ಸಾಲಿಡಾರಿಟಿ ಟ್ರಯಲ್‌ನ ಕಾರ್ಯನಿರ್ವಾಹಕರ ಗುಂಪು ಸಭೆ ಸೇರಿ ಕೋವಿಡ್ ರೋಗಿಗಗಳ ಮೇಲೆ ಹೈಡ್ರೋಕ್ಲೋರೊಕ್ವಿನ್ ಪರಿಣಾಮಗಳ ಕುರಿತು ಜಾಗತಿಕವಾಗಿ ಲಭ್ಯವಿರುವ ಎಲ್ಲ ಸಾಕ್ಷ್ಯಗಳ ಸಮಗ್ರ ವಿಶ್ಲೇಷಣೆ ಮತ್ತು ವಿಮರ್ಶಾತ್ಮಕ ಮೌಲ್ಯಮಾಪನ ಮಾಡಲು ಒಪ್ಪಿದೆ. ಈವರೆಗೆ ಸಂಗ್ರಹಿಸಿದ ಡೇಟಾವನ್ನು ಪರಿಶೀಲನೆ ನಡೆಸುವ ಸಂದರ್ಭ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ ಎಂದಿದ್ದಾರೆ.