ಮಾಸ್ಕೋ(ರಷ್ಯಾ): ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಿರುವ ರಷ್ಯಾ ಈಗಲೂ ಅನೇಕ ಗಂಭೀರ ಸ್ವರೂಪದ ಆರೋಪಗಳನ್ನು ಮಾಡುತ್ತಿದೆ.
ಅಮೆರಿಕ ಉಕ್ರೇನ್ನಲ್ಲಿ ಜೈವಿಕ ಶಸ್ತ್ರಗಳನ್ನು ಅಭಿವೃದ್ಧಿ ಮಾಡುತ್ತಿದೆ ಎಂದು ರಷ್ಯಾ ಆರೋಪಿಸುತ್ತಲೇ ಬಂದಿದ್ದು, ಉಕ್ರೇನ್ ರಾಷ್ಟ್ರವು ಅಮೆರಿಕ ರಕ್ಷಣಾ ಇಲಾಖೆಯ ಅತಿ ದೊಡ್ಡ ಜೈವಿಕ ಪ್ರಯೋಗಾಲಯವಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಈ ಕುರಿತು ಪ್ರತಿಕ್ರಿಯಿಸಿ, ಉಕ್ರೇನ್‌ನಲ್ಲಿರುವ ಅಮೆರಿಕದ ಪ್ರಯೋಗಾಲಯಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ದಾಖಲೆಗಳು ಜೈವಿಕ ಶಸ್ತ್ರಗಳ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳಾಗಿವೆ. ಇದಕ್ಕೆ ಉಕ್ರೇನ್ ಮತ್ತು ಅಮೆರಿಕನ್ನರು ಸಹಿ ಮಾಡಿದ್ದಾರೆ ಎಂದು ಆರ್ಟಿ ನ್ಯೂಸ್ ವರದಿ ಮಾಡಿದೆ.
ಈ ಹಿಂದೆ ಸೋವಿಯತ್ ಒಕ್ಕೂಟಕ್ಕೆ ಒಳಪಟ್ಟಿದ್ದ ಎಲ್ಲಾ ರಾಷ್ಟ್ರಗಳಲ್ಲೂ ಅಮೆರಿಕ ಈ ರೀತಿಯ ಅನೇಕ ಪ್ರಯೋಗಾಲಯಗಳನ್ನು ಸ್ಥಾಪಿಸಿವೆ. ಈ ಪ್ರಯೋಗಾಲಯಗಳು ರಷ್ಯಾ ಗಡಿಗೆ ಸಮೀಪದಲ್ಲಿವೆ ಎಂದು ಸೆರ್ಗೆಯ್ ಲಾವ್ರೊವ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಇರಾಕ್ನ ಅತಿದೊಡ್ಡ ಮಿಲಿಟರಿ ವಾಯುನೆಲೆ ಮೇಲೆ ನಾಲ್ಕು ರಾಕೆಟ್ಗಳ ದಾಳಿ!
'ನಾವೇ ಚಾಂಪಿಯನ್': ಉಕ್ರೇನ್ ನಡುವಿನ ಯುದ್ಧ ಆರಂಭವಾದಂತೆ ಅನೇಕ ದೇಶಗಳು ರಷ್ಯಾ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದ್ದು, ನಿರ್ಬಂಧಗಳು ಯಾವಾಗಲೂ ರಷ್ಯಾವನ್ನು ಮಾತ್ರ ಬಲಪಡಿಸಿವೆ ಎಂದು ಲಾವ್ರೊವ್ ಹೇಳಿದ್ದಾರೆ.
ಪುಟಿನ್ ಹೇಳಿದಂತೆ, ರಷ್ಯಾದ ಮೇಲೆ ವಿಧಿಸಲಾದ ನಿರ್ಬಂಧಗಳ ವಿಷಯದಲ್ಲಿ ನಾವು ಚಾಂಪಿಯನ್ ಆಗಿದ್ದೇವೆ. ಉತ್ತರ ಕೊರಿಯಾದ ಮೇಲೆ ವಿಧಿಸಲಾದ ನಿರ್ಬಂಧಗಳಿಗಿಂತ ಎರಡು ಪಟ್ಟು ಹೆಚ್ಚು ನಿರ್ಬಂಧವನ್ನು ನಮ್ಮ ಮೇಲೆ ಹೇರಲಾಗಿದೆ. ನಿರ್ಬಂಧಗಳು ಯಾವಾಗಲೂ ನಮ್ಮನ್ನು ಬಲಪಡಿಸಿವೆ ಎಂದು ಲಾವ್ರೊವ್ ಅಭಿಪ್ರಾಯಪಟ್ಟಿದ್ದಾರೆ.