ವಾರ್ಸಾ(ಪೋಲೆಂಡ್): ಉಕ್ರೇನ್ ಮತ್ತು ರಷ್ಯಾ ಯುದ್ಧ ಮುಂದುವರೆದಿದ್ದು, ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದೆ. ಲಕ್ಷಾಂತರ ಮಂದಿ ಈಗಾಗಲೇ ಉಕ್ರೇನ್ ತೊರೆದು, ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಬೇರೆ ರಾಷ್ಟ್ರಗಳಲ್ಲಿ ಅವರಿಗೆ ನೆಲೆ ಸಿಗುತ್ತದೆಯೋ? ಇಲ್ಲವೋ? ಎಂಬ ವಿಚಾರದ ನಡುವೆ ಕೆನಡಾ ಉಕ್ರೇನ್ ನಿರಾಶ್ರಿತರಿಗೆ ಆಶಾಕಿರಣವಾಗಿ ಗೋಚರಿಸುತ್ತಿದೆ.
ಯುದ್ಧದಿಂದಾಗಿ ನಿರಾಶ್ರಿತರಾದ ಉಕ್ರೇನ್ ಪ್ರಜೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಆಶ್ರಯ ನೀಡುವುದಾಗಿ ಪೋಲೆಂಡ್ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ್ದಾರೆ. ಲಕ್ಷಾಂತರ ಉಕ್ರೇನಿಯನ್ನರು ತಮ್ಮ ದೇಶವನ್ನು ತೊರೆದು ಪಲಾಯನ ಮಾಡುವುದನ್ನು ನೋಡಿದರೆ, ನಮ್ಮ ಹೃದಯಗಳು ಒಡೆಯುತ್ತವೆ ಎಂದು ಟ್ರೂಡೋ ಹೇಳಿದ್ದಾರೆ. ಫೆಬ್ರವರಿ 24ರಿಂದ ಸುಮಾರು 15 ಲಕ್ಷ ಉಕ್ರೇನ್ ಜನರು ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ. ನಿರಾಶ್ರಿತರಿಗೆ ಕೆನಡಾ ಸಹಾಯ ಮಾಡುತ್ತದೆ ಎಂದು ಟ್ರೂಡೋ ಭರವಸೆ ನೀಡಿದ್ದಾರೆ. ಇದರ ಜೊತೆಗೆ ರಷ್ಯಾದ ವಿರುದ್ಧ ಕಠಿಣ ನಿರ್ಬಂಧಗಳನ್ನು ಮುಂದುವರೆಸುವ ಕುರಿತು ಚರ್ಚೆ ನಡೆಸಿದರು.
ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ ಮತ್ತು ಪ್ರಧಾನ ಮಂತ್ರಿ ಮಾಟಿಯುಸ್ಜ್ ಮೊರಾವಿಕಿ ಅವರೊಂದಿಗಿನ ಮಾತುಕತೆ ನಡೆಸಿದ ಟ್ರುಡೋ ಇದೇ ವೇಳೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಕೆಲವು ವಿಚಾರಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡುವ ಉಕ್ರೇನ್‌ನ ಸಾಮರ್ಥ್ಯ ತಪ್ಪಾಗಿ ಪರಿಗಣಿಸಿದ ಯುಎಸ್
ನಿರಾಶ್ರಿತರು ಕೆನಡಾಕ್ಕೆ ಬೇಗನೆ ಬರಲು ಸಾಧ್ಯವಾಗುವಂತೆ ಕಾರ್ಯವಿಧಾನಗಳನ್ನು ವೇಗಗೊಳಿಸಲಾಗುತ್ತದೆ. ನಿರಾಶ್ರಿತರ ವಿದ್ಯಾಭ್ಯಾಸ ಮತ್ತು ಕೆಲಸ ಮಾಡಲು ನಾವು ಅವಕಾಶ ನೀಡುತ್ತೇವೆ ಎಂದು ಡುಡಾ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಟ್ರುಡೊ ಭರವಸೆ ನೀಡಿದ್ದಾರೆ.
ಯುದ್ಧ ಮುಗಿದ ನಂತರ ನಿರಾಶ್ರಿತರು ತಮ್ಮ ದೇಶಕ್ಕೆ ಹಿಂದಿರುಗಬಹುದು. ಕೆನಡಾದಲ್ಲಿಯೇ ತಮ್ಮ ಜೀವನವನ್ನು ಮುಂದುವರಿಸಲು ಆಯ್ಕೆ ಮಾಡುವ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ನಾವು ಆಲೋಚಿಸುತ್ತಿದ್ದೇವೆ ಎಂದು ಟ್ರೂಡೋ ಹೇಳಿದ್ದಾರೆ.
ಪುಟಿನ್ ವಿರುದ್ಧ ಅಸಮಾಧಾನ: ಯುದ್ಧಕ್ಕೆ ಕಾರಣವಾದ ರಷ್ಯಾದ ನಾಯಕರನ್ನು, ವಿಶೇಷವಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದೆ ತರಲು ಕೆನಡಾ ಸಕ್ರಿಯವಾಗಿ ಸಹಾಯ ಮಾಡುತ್ತದೆ. ಪುಟಿನ್ ಪಡೆ ನಾಗರಿಕರನ್ನು ಗುರಿಯಾಗಿಸಿ, ದಾಳಿ ನಡೆಸುತ್ತಿದೆ. ಪುಟಿನ್ ಅವರನ್ನು ಯುದ್ಧ ಅಪರಾಧಗಳಿಗೆ ಹೊಣೆಗಾರನನ್ನಾಗಿ ಮಾಡಲು ಕೆನಡಾ ಶ್ರಮಿಸುತ್ತದೆ ಎಂದು ಟ್ರುಡೋ ಹೇಳಿದ್ದಾರೆ.