ಮಾಸ್ಕೋ(ರಷ್ಯಾ): ಅಮೆರಿಕದ ಖಾಸಗಿ ಕಂಪನಿಯೊಂದು ಪ್ರಕಟಿಸಿದ ವಾಣಿಜ್ಯ ಉಪಗ್ರಹ ಆಧಾರಿತ ಚಿತ್ರಗಳು ಉಕ್ರೇನ್ ಬಳಿಯ ಹಲವಾರು ಸ್ಥಳಗಳಲ್ಲಿ ರಷ್ಯಾದ ಸೇನಾ ಜಮಾವಣೆಯನ್ನು ಬಹಿರಂಗಪಡಿಸಿವೆ.
ಉಭಯ ದೇಶಗಳ(ರಷ್ಯಾ-ಉಕ್ರೇನ್) ಬಿಕ್ಕಟ್ಟನ್ನು ತಗ್ಗಿಸುವ ಗುರಿ ಹೊಂದಿರುವ ರಾಜತಾಂತ್ರಿಕತೆಯ ಕೋಲಾಹಲದ ನಡುವೆ ರಷ್ಯಾ ಉಕ್ರೇನ್ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಉಪಗ್ರಹ ಚಿತ್ರವೊಂದು ಬಿಡುಗಡೆಯಾಗಿದೆ. ಬೆಲಾರಸ್, ಕ್ರಿಮಿಯಾ ಹಾಗೂ ಪಶ್ಚಿಮ ರಷ್ಯಾದಿಂದ ಸೆರೆ ಹಿಡಿಯಲಾದ ಉಪಗ್ರಹ ಚಿತ್ರಗಳು ಇವಾಗಿವೆ.
![Russian military](https://etvbharatimages.akamaized.net/etvbharat/prod-images/14459367_thumbs.jpg)
ಕ್ರಿಮಿಯಾವೊಂದರಲ್ಲೇ 550ಕ್ಕೂ ಯೋಧರ ಟೆಂಟ್‌ಗಳು, ನೂರಾರು ವಾಹನಗಳು ಉಪಗ್ರಹ ಚಿತ್ರದಲ್ಲಿ ಕಂಡುಬರುತ್ತವೆ. ಪೂರ್ವ ಉಕ್ರೇನ್‌ನ ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳ ಮೇಲೆ ರಷ್ಯಾ ಹೆಚ್ಚು ಗಮನಹರಿಸುತ್ತಿದೆ. ಉಕ್ರೇನ್ ಪಡೆಗಳು ಮತ್ತು ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳ ನಡುವೆ 2014 ರಿಂದ ಹೋರಾಟ ನಡೆಯುತ್ತಿದೆ.
![Russian military](https://etvbharatimages.akamaized.net/etvbharat/prod-images/14459367_thumb.jpg)
ಪೂರ್ವ ಉಕ್ರೇನ್‌ನ ಗಡಿಯ ಬಳಿ ರಷ್ಯಾ ತನ್ನ ಸೇನೆಯನ್ನು ಹೆಚ್ಚಿಸುತ್ತಿದೆ. ಪ್ರದೇಶದ ಮೂಲಕ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಬುಧವಾರದಿಂದ ಯುದ್ಧ ಆರಂಭವಾಗಬಹುದು ಎಂದು ಶನಿವಾರ ಮಾಧ್ಯಮ ವರದಿಗಳು ಹೇಳಿದ್ದವು. ಈ ನಡುವೆ, ಒಂದು ವೇಳೆ ರಷ್ಯಾ ದಾಳಿ ನಡೆಸಿದ್ದೇ ಆದಲ್ಲಿ ಅದು ಭಾರಿ ವಿನಾಶಕ್ಕೆ ಕಾರಣವಾಗಲಿದೆ. ಅಮರಿಕವು ರಷ್ಯಾ ಜತೆ ಸಂಬಂಧ ಕಡಿದುಕೊಳ್ಳಲಿದೆ ಎಂದು ಶನಿವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಒಂದು ಗಂಟೆಗಳ ಸುದೀರ್ಘ ಮಾತುಕತೆ ವೇಳೆ ಎಚ್ಚರಿಸಿದ್ದರು.
ಕಳೆದ ಕೆಲವು ದಿನಗಳಿಂದ ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನ ಮಾತಾವರಣ ನಿರ್ಮಾಣವಾಗಿದ್ದು, ರಷ್ಯಾ 1.30 ಲಕ್ಷಕ್ಕೂ ಹೆಚ್ಚು ಸೈನಿಕರು, ಕ್ಷಿಪಣಿಗಳು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ರಷ್ಯಾ ಇದನ್ನು ನಿರಾಕರಿಸುತ್ತಿದೆ.
ಇದನ್ನೂ ಓದಿ: ಆದಷ್ಟು ಬೇಗ ಸ್ವದೇಶ ಸೇರಿಕೊಳ್ಳಿ: ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ಇಸ್ರೇಲ್ ಸೂಚನೆ