ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಇಂದಿಗೆ 10 ದಿನಗಳಾಗಿದ್ದು, ಪುಟ್ಟ ರಾಷ್ಟ್ರ ವಿವಿಧ ದೇಶಗಳ ನೆರವಿನಿಂದ ಪ್ರತಿರೋಧ ನೀಡುತ್ತಲೇ ಬಂದಿದೆ. ಆದರೆ ಇದೀಗ ಉಕ್ರೇನ್ ತನ್ನ ಮೇಲೆ ಪ್ರತಿದಾಳಿ ಮಾಡುವುದನ್ನು ತಡೆಯಲು ರಷ್ಯಾ ಚೆರ್ನೋಬಿಲ್ ಪರಮಾಣು ವಲಯವನ್ನು ಬಳಸುತ್ತಿದೆ.
ಚೆರ್ನೋಬಿಲ್ ಮತ್ತು ಝಪೋರಿಝಿಯಾ ಪರಮಾಣು ಸ್ಥಾವರ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಿ ಶಸ್ತ್ರಾಸ್ತ್ರಗಳನ್ನು ಇಟ್ಟಿದೆ. ಜಪೋರಿಜಿಯಾ ಪರಮಾಣು ಸ್ಥಾವರವನ್ನು ರಷ್ಯಾ ಸೇನೆ ವಶಪಡಿಸಿಕೊಂಡ ಬೆನ್ನಲ್ಲೇ ಮತ್ತೆ ಈ ಪ್ರದೇಶದಲ್ಲಿ ಪ್ರತಿದಾಳಿ ನಡೆಯುವ ಸಾಧ್ಯತೆ ಇದೆ ಎಂದು ಉಕ್ರೇನ್ ಇಂಧನ ಉಪ ಸಚಿವ ಯಾರೋಸ್ಲಾವ್ ಡೆಮ್ಚೆಂಕೋವ್ ಹೇಳಿದ್ದಾರೆ.
ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಸಮೀಪದಲ್ಲಿ ಸಕ್ರಿಯ ಯುದ್ಧದ ಬಗ್ಗೆ ನಾವು ತುಂಬಾ ಚಿಂತಿತರಾಗಿದ್ದೇವೆ ಎಂದು ಉಕ್ರೇನ್‌ನ ಪ್ರಾವ್ಡಾದಲ್ಲಿ ಬರೆದ ಲೇಖನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಹತ್ತಕ್ಕೂ ಹೆಚ್ಚು ಪರಮಾಣು ರಿಯಾಕ್ಟರ್‌ಗಳು ಮತ್ತು ಸಾವಿರಾರು ಟನ್‌ಗಳಷ್ಟು ಹೆಚ್ಚು ವಿಕಿರಣಶೀಲ ಬಿಡುವ ಪರಮಾಣು ಇಂಧನವನ್ನು ಹೊಂದಿರುವ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಯುದ್ಧ ನಡೆಸಲಾಗುತ್ತಿದೆ ಎಂದಿದ್ದಾರೆ.
ಉಕ್ರೇನ್ 15 ಪರಮಾಣು ವಿದ್ಯುತ್ ಘಟಕಗಳನ್ನು ಹೊಂದಿದೆ. ಇದರಲ್ಲಿ ಆರು ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೋರಿಝಿಯಾ (6,000 ಮೆಗಾವ್ಯಾಟ್) ಸೇರಿದಂತೆ, ಇದು ಪರಮಾಣು ಇಂಧನ ಶೇಖರಣಾ ಸೌಲಭ್ಯವನ್ನೂ ಹೊಂದಿದೆ.
ರಷ್ಯಾದ ಸೇನೆ ನಿನ್ನೆ ಚೆರ್ನೋಬಿಲ್ ಮತ್ತು ಜಪೋರಿಜಿಯಾ ಪರಮಾಣು ವಿದ್ಯುತ್ ಸ್ಥಾವರದ ಪ್ರದೇಶವನ್ನು ವಶಪಡಿಸಿಕೊಂಡಿದೆ. ಇವು ಪರಮಾಣು ಭಯೋತ್ಪಾದನೆಯ ಕೃತ್ಯಗಳಾಗಿವೆ ಎಂದು ಡೆಮ್ಚೆಂಕೋವ್ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ ವಿರುದ್ಧ ನಿರ್ಣಯದ ವಿಶ್ವಸಂಸ್ಥೆಯ ಮತ್ತೊಂದು ಮತದಾನಕ್ಕೂ ಭಾರತ ಗೈರು