ಕೀವ್(ಉಕ್ರೇನ್): ರಷ್ಯಾ ದಾಳಿ ಉಕ್ರೇನ್ಗೆ ಮಾತ್ರವಲ್ಲ, ಸುತ್ತಲಿನ ರಾಷ್ಟ್ರಗಳ ಮೇಲೆಯೂ ಆತಂಕ ಮೂಡಿಸಿದೆ. ರಷ್ಯಾದ ಪಡೆಗಳು ಭೀಕರ ದಾಳಿ ನಡೆಸಿ, ಉಕ್ರೇನ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದು, ಪ್ರಮುಖ ನಗರವಾದ ಚೆರ್ನೋಬಿಲ್ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದುಕೊಂಡಿವೆ ಎಂದು ಉಕ್ರೇನ್ ತಿಳಿಸಿದೆ.
ಚೆರ್ನೋಬಿಲ್ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡ ನಂತರ, ಆ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಬಹುದು ಎಂಬ ಭಯ ಸುತ್ತಲಿನ ಪ್ರದೇಶಗಳಲ್ಲಿ ಆವರಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಪರಮಾಣು ಅಸ್ತ್ರಗಳನ್ನು ಉಕ್ರೇನ್ನ ಚೆರ್ನೋಬಿಲ್ನಲ್ಲಿ ಶೇಖರಿಸಿಟ್ಟಿರಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ರಷ್ಯಾ ದಾಳಿ ನಡೆಸಿದೆ ಎನ್ನಲಾಗಿದೆ.
ಈ ಕುರಿತಂತೆ ವಿಡಿಯೋವೊಂದು ಬಿಡುಗಡೆಯಾಗಿದ್ದು, ರಷ್ಯಾದ ಟ್ಯಾಂಕರ್ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ನಾಶವಾದ ರಿಯಾಕ್ಟರ್‌ನ ಮುಂದೆ ನಿಂತಿರುವುದು ಗೊತ್ತಾಗುತ್ತದೆ. ಉಕ್ರೇನ್ ರಾಜಧಾನಿ ರಾಜಧಾನಿ ಕೀವ್ನಿಂದ ಉತ್ತರಕ್ಕೆ 60 ಮೈಲುಗಳಷ್ಟು ದೂರದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಒಡೆಸ್ಸಾ ಕರಾವಳಿಯಲ್ಲಿ ಹಡಗೊಂದನ್ನು ಬಾಂಬ್ ದಾಳಿಯ ಮೂಲಕ ನಾಶಪಡಿಸಲಾಗಿದೆ.
ಉಕ್ರೇನ್‌ನಲ್ಲಿನ ಯುದ್ಧವು ಹತ್ತಿರ ಬೇರೆ ಬೇರೆ ರಾಷ್ಟ್ರಗಳಿಗೆ ವೇಗವಾಗಿ ಹರಡಬಹುದು. ಇದರಿಂದಾಗಿ ಯುರೋಪ್‌ನಲ್ಲಿ ಸಂಘರ್ಷ ಉಂಟಾಗಬಹುದು ಎಂದು ಊಹಿಸಲಾಗುತ್ತಿದೆ. ಗುರುವಾರ ಸುಮಾರು 20ಕ್ಕೂ ಹೆಚ್ಚು ಹೆಲಿಕಾಪ್ಟರ್ಗಳೊಂದಿಗೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಅವುಗಳಲ್ಲಿ ನಾಲ್ಕು ಹೆಲಿಕಾಪ್ಟರ್ಗಳನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಇದನ್ನೂ ಓದಿ: ರಷ್ಯಾ ಮೇಲೆ ನಿರ್ಬಂಧ ಹೇರಿದ ಚೀನಾ ವಿರೋಧಿ ಪುಟ್ಟದೇಶ ತೈವಾನ್
ರಷ್ಯಾದ ಪಡೆಗಳು ಈಗ ಕೀವ್ ಮೇಲೆ ಬಾಂಬ್ ಹಾಕಲಿದ್ದಾರೆ. ಅಧಿಕಾರಿಗಳು ನಮಗೆ ಅಡಗಿಕೊಳ್ಳಲು ಮನವಿ ಮಾಡಿದ್ದಾರೆ ಎಂದು ಉಕ್ರೇನ್ ವ್ಯಕ್ತಿಯೊಬ್ಬರು ಮೇಲ್ ಆನ್‌ಲೈನ್‌ಗೆ ತಿಳಿಸಿದ್ದಾರೆ. ಈಗಾಗಲೇ ಕೆಲವು ಮಿಲಿಟರಿ ನೆಲೆಗಳು, ವಿಮಾನ ನಿಲ್ದಾಣಗಳು, ನಗರಗಳು ಮತ್ತು ಬಂದರುಗಳನ್ನು ರಷ್ಯಾ ತನ್ನ ಅಧೀನಕ್ಕೆ ತೆಗದುಕೊಂಡಿದ್ದು, ಉಳಿದ ಪ್ರದೇಶಗಳಲ್ಲಿ ಉಕ್ರೇನ್ ಹೋರಾಟ ಮುಂದುವರೆಸಿದೆ.