ಲಂಡನ್: ವಿಶ್ವ ಆರೋಗ್ಯ ಸಂಸ್ಥೆಯು ಲಂಡನ್‌ನ ಇಂಪೀರಿಯಲ್ ಕಾಲೇಜು ನೇತೃತ್ವದಲ್ಲಿ ರಕ್ತದೊತ್ತಡ ಸಂಬಂಧ ಸಂಶೋಧನೆಯೊಂದನ್ನು ನಡೆಸಿದ್ದು, ಇದರಲ್ಲಿ 30 ರಿಂದ 79 ವಯಸ್ಸಿನವರು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿರುತ್ತಾರೆ ಎಂದು ತಿಳಿದು ಬಂದಿದೆ.
ರಕ್ತದೊತ್ತಡದಿಂದ ಬಳಲುತ್ತಿರುವ 1.28 ಬಿಲಿಯನ್ ಜನ
ಕಳೆದ 30 ವರ್ಷಗಳಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದವರ ಸಂಖ್ಯೆ 650 ಮಿಲಿಯನ್‌ನಿಂದ 1.28 ಬಿಲಿಯನ್‌ಗೆ ಹೆಚ್ಚಾಗಿದೆ ಎಂದು ಈ ಸಂಶೋಧನಾ ವರದಿ ಬಹಿರಂಪಡಿಸಿದೆ.
ಹಲವು ಕಾಯಿಲೆಗಳ ಉಲ್ಬಣಕ್ಕೆ ಬಿಪಿಯೇ ಕಾರಣ
ಅಧಿಕ ರಕ್ತದೊತ್ತಡವು ಹೃದಯ, ಮೆದುಳು ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ. ವಿಶ್ವಾದ್ಯಂತ ಹೆಚ್ಚುತ್ತಿರುವ ಸಾವು, ರೋಗಗಳಿಗೆ ಬಿಪಿ(Blood Pressure) ಪ್ರಮುಖ ಕಾರಣವಾಗಿದೆ. ಬಿಪಿಯನ್ನು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಸುಲಭವಾಗಿ ಪತ್ತೆಹಚ್ಚಬಹುದು. ಜತೆಗೆ ಕಡಿಮೆ ವೆಚ್ಚದಲ್ಲಿ ಔಷಧಗಳನ್ನು ಪಡೆದು ಗುಣಮುಖರಾಗಬಹುದು.
ವೈದ್ಯರು ಮತ್ತು ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ 1990 ರಿಂದ 2019 ರ ಅವಧಿಯನ್ನು ಒಳಗೊಂಡಿದೆ. ಈ ಅಧ್ಯಯನಕ್ಕೆ 184 ದೇಶಗಳಲ್ಲಿ 30-79 ವರ್ಷ ವಯಸ್ಸಿನ 100 ಮಿಲಿಯನ್ ಜನರನ್ನು ಬಳಸಿಕೊಳ್ಳಲಾಗಿದೆ. ಇದು ಜಾಗತಿಕ ಜನಸಂಖ್ಯೆಯ ಶೇಕಡಾ 99 ರಷ್ಟು ಜನರನ್ನೊಳಗೊಂಡಿದೆ.
ಶ್ರೀಮಂತ ರಾಷ್ಟ್ರಗಳಲ್ಲಿ ಕಡಿಮೆ ಪ್ರಕರಣ
ಅಧ್ಯಯನದ ವರದಿಯ ಡೇಟಾವನ್ನು ವಿಶ್ಲೇಷಿಸಿರುವ ಸಂಶೋಧಕರು, 1990 ರಿಂದ 2019ರವರೆಗೆ ಪ್ರಪಂಚದಲ್ಲಿ ಅಧಿಕ ರಕ್ತದೊತ್ತಡ ಕಂಡು ಬರುವವರಲ್ಲಿ ಬದಲಾವಣೆ ಕಂಡು ಬಂದಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಬಿಪಿ ಪ್ರಮಾಣ ಕಡಿಮೆಯಿದೆ. ಮಧ್ಯಮ ಮತ್ತು ಹಿಂದುಳಿದ ರಾಷ್ಟ್ರಗಳ ಜನರಲ್ಲಿ ಬ್ಲಡ್ ಪ್ರಶರ್ ಜಾಸ್ತಿಯಿದೆ.
2019 ರಲ್ಲಿ ಕೆನಡಾ, ಪೆರು ಮತ್ತು ಸ್ವಿಟ್ಜರ್ಲ್ಯಾಂಡ್ ರಾಷ್ಟ್ರಗಳ ಜನರಲ್ಲಿ ಕಡಿಮೆ ರಕ್ತದೊತ್ತಡ ಪ್ರಕರಣಗಳು ಕಂಡು ಬಂದಿವೆ. ಡೊಮಿನಿಕನ್ ರಿಪಬ್ಲಿಕ್, ಜಮೈಕಾ ರಾಷ್ಟ್ರಗಳಲ್ಲಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಕಂಡು ಬಂದರೆ, ಹಂಗೇರಿ, ಪರಾಗ್ವೆಯಲ್ಲಿ ಪುರುಷರಿಗೆ ಅಧಿಕ ರಕ್ತದೊತ್ತಡ ಕಂಡು ಬಂದಿದೆ.
ಅಧಿಕ ರಕ್ತದೊತ್ತಡ ಹೊಂದಿರುವ ಜನರ ಶೇಕಡಾವಾರು 1990 ರಿಂದ ಬದಲಾಗಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರ ಸಂಖ್ಯೆ 1.28 ಬಿಲಿಯನ್‌ಗೆ ದ್ವಿಗುಣಗೊಂಡಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಒಂದು ಶತಕೋಟಿಗೂ ಹೆಚ್ಚು ಜನರು (ಪ್ರಪಂಚದಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ಶೇಕಡಾ 82 ರಷ್ಟು ಜನರು) ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
720 ಮಿಲಿಯನ್ ಜನರು ಪಡೆಯುತ್ತಿಲ್ಲ ಚಿಕಿತ್ಸೆ
ಅಧಿಕ ರಕ್ತದೊತ್ತಡ ಹೊಂದಿರುವ ಸುಮಾರು 580 ಮಿಲಿಯನ್ ಜನರು (ಶೇ 41ರಷ್ಟು ಮಹಿಳೆಯರು ಮತ್ತು ಶೇ 51ರಷ್ಟು ಪುರುಷರು) ಎಂದಿಗೂ ಬಿಪಿ ಚೆಕ್ ಮಾಡಿಸಿಕೊಂಡಿರಲಿಲ್ಲ. ಬಿಪಿಯಿರುವ 720 ಮಿಲಿಯನ್ ಜನರು ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಕೆನಡಾ, ಐಸ್ಲ್ಯಾಂಡ್ ಮತ್ತು ರಿಪಬ್ಲಿಕ್ ಆಫ್ ಕೊರಿಯಾದ ಜನರು ಬಿಪಿಗೆ ಪರಿಣಾಮಕಾರಿ ಚಿಕಿತ್ಸೆ ಪಡೆಯುತ್ತಾರೆ. ಮಧ್ಯಮ ಹಾಗೂ ಹಿಂದುಳಿದ ರಾಷ್ಟ್ರಗಳ ಜನತೆ ಚಿಕಿತ್ಸೆ ಪಡೆಯುವುದು ತೀರಾ ಕಡಿಮೆ
ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕ ಬಿನ್ ಜೌ ಮಾತನಾಡಿ, 1990 ರಿಂದ ಹೆಚ್ಚಿನ ದೇಶಗಳಲ್ಲಿ ಬಿಪಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಗತಿಕ ಆರೋಗ್ಯ ಪಿಡುಗಿನ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ನಿಧಿಗಳು ಮತ್ತು ಆಯಾಯ ದೇಶಗಳ ಸರ್ಕಾರಗಳು ಜಾಗತಿಕ ಚಿಕಿತ್ಸಾ ಇಕ್ವಿಟಿಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಬಿಪಿ ಚಿಕಿತ್ಸೆಗೆ WHO ಮಾರ್ಗಸೂಚಿ
ವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ಔಷಧೀಯ ಚಿಕಿತ್ಸೆಗಾಗಿ ಡಬ್ಲ್ಯೂಹೆಚ್ಒ ಹೊಸ ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡಿದೆ. ಅಧಿಕ ರಕ್ತದೊತ್ತಡದ ನಿರ್ವಹಣೆಯನ್ನು ಸುಧಾರಿಸಲು ದೇಶಗಳಿಗೆ ಸಹಾಯ ಮಾಡಲು ಹೊಸ ಶಿಫಾರಸುಗಳನ್ನೂ ಮಾಡಿದೆ. ಶುಗರ್, ಹೃದಯ ಸಂಬಂಧಿ ಕಾಯಿಲೆಯಿರುವವರಿಗೆ ಚಿಕಿತ್ಸೆ ನೀಡುವುದು. ವ್ಯಾಯಾಮ ಮಾಡುವಂತೆ ಸಲಹೆ ನೀಡುವುದು. ತಂಬಾಕು ಉತ್ಪನ್ನಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು. ದೇಶದಲ್ಲಿ ಜನರ ಜೀವ ಉಳಿಸಲು ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಡಬ್ಲ್ಯೂಹೆಚ್ಒ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ ವೈರಸ್ ಬದುಕುಳಿಯಲು ತನ್ನ ಆಕಾರವನ್ನು ಬದಲಾಯಿಸಬಹುದು: ಅಧ್ಯಯನ