ಪ್ಯಾರೀಸ್: ಟೆಕ್ ದೈತ್ಯ ಸಂಸ್ಥೆ ಗೂಗಲ್‌ಗೆ ಫ್ರಾನ್ಸ್‌ನ ಸರ್ಕಾರಿ ಮೂಲದ ಆ್ಯಂಟಿ ಟ್ರಸ್ಟ್ ಏಜೆನ್ಸಿ ಭಾರಿ ದಂಡ ವಿಧಿಸಿದೆ. ಸುದ್ದಿ ಪ್ರಕಟಣೆಗೆ ಸಂಬಂಧಿಸಿದಂತೆ ಸ್ಥಳೀಯ ಸುದ್ದಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ಮಿಲಿಯನ್ ಯುರೋಗಳಷ್ಟು ದಂಡ ವಿಧಿಸಲಾಗಿದೆ.
ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದು 4,415 ಕೋಟಿ ರೂ. ದಂಡ. ಆದರೆ ಈ ಬಗ್ಗೆ ಗೂಗಲ್ ಪ್ರತಿನಿಧಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಸುದ್ದಿ ಸಂಸ್ಥೆಗಳು ಮತ್ತು ಗೂಗಲ್ ನಡುವೆ ದೀರ್ಘಕಾಲದಿಂದ ಒಂದು ರೀತಿಯ ಸಮರ ನಡೆಯುತ್ತಲೇ ಇರುವುದು ಎಲ್ಲರಿಗೂ ತಿಳಿದ ವಿಚಾರ. ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ತಮ್ಮ ಸುದ್ದಿಗಳನ್ನು ಗೂಗಲ್ ನ್ಯೂಸ್‌ನಲ್ಲಿ ಪ್ರಕಟಿಸುವ ಮೂಲಕ ಭಾರಿ ಆದಾಯವನ್ನು ಗಳಿಸುತ್ತಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳ ಮಾಲೀಕರು ಹೇಳಿಕೊಂಡಿದ್ದಾರೆ. ಜಾಹೀರಾತು ಆದಾಯದಲ್ಲಿ ತಮ್ಮ ಪಾಲನ್ನು ನೀಡುವಂತೆ ಅವರು ಒತ್ತಾಯಿಸುತ್ತಿದ್ದಾರೆ.
ಆಸ್ಟ್ರೇಲಿಯಾ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳ ಸರ್ಕಾರಗಳು ಈ ನಿಟ್ಟಿನಲ್ಲಿ ವಿಶೇಷ ಕಾನೂನುಗಳನ್ನು ರೂಪಿಸಿವೆ. ಸುದ್ದಿ ಪ್ರಕಟಿಸಲು ವಿವಿಧ ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದವು. ನಿಯಮ ಪಾಲಿಸಲು ಗೂಗಲ್‌ಗೆ ಸಮಯಾವಕಾಶ ಕೂಡ ನೀಡಲಾಗಿತ್ತು.
ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರ ಎಚ್ಚರಿಕೆಯ ಪರಿಣಾಮ: ಕೋವಿಡ್ ವ್ಯಾಕ್ಸಿನ್ಗೆ ಮುಗಿಬಿದ್ದ ಜನ
ಸ್ಥಳೀಯ ಸುದ್ದಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಗೂಗಲ್‌ಗೆ ಫ್ರಾನ್ಸ್‌ನ ಆ್ಯಂಟಿ ಟ್ರಸ್ಟ್ ಏಜೆನ್ಸಿ ಈ ಮೊದಲು ಸೂಚಿಸಿದೆ. ಆದರೆ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ಭಾರಿ ದಂಡ ವಿಧಿಸುವ ನಿರ್ಧಾರಕ್ಕೆ ಏಜೆನ್ಸಿ ಬಂದಿದೆ. ಫ್ರೆಂಚ್ ಸರ್ಕಾರದ ಕಾನೂನು ಮತ್ತು ನಿಬಂಧನೆಗಳ ಅನುಷ್ಠಾನವನ್ನು ವಿಳಂಬಗೊಳಿಸುತ್ತಿದೆ. ಆ ಮೂಲಕ ಹಕ್ಕುಸ್ವಾಮ್ಯ ಉಲ್ಲಂಘಿಸಿದೆ ಎಂದು ಗೂಗಲ್ ವಿರುದ್ಧ ಆರೋಪಿಸಲಾಗಿದೆ.