ಜಿನೀವಾ(ಸ್ವಿಜರ್ಲ್ಯಾಂಡ್): ಕೋವಿಡ್ -19 ಮಾರಕ ಕಾಯಿಲೆಗೆ ಸದ್ಯ ಲಸಿಕೆ ಬರುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ ಅಧಿಕಾರಿಯೊಬ್ಬರು ಎಚ್ಚರಿಕೆಯ ಕರೆ ನೀಡಿದ್ದಾರೆ. ಈಗ ಬರುತ್ತಿರುವ ಲಸಿಕೆಗಳು ಸಿಲ್ವರ್ ಬುಲೆಟ್ ಅಲ್ಲ, ಆದರೆ ಇದು ಸಂವತ್ಸರದಿಂದ ಕಾಡುತ್ತಿರುವ, 74 ದಶಲಕ್ಷಕ್ಕೂ ಹೆಚ್ಚು ಜನರನ್ನು ನಲುಗಿಸಿದ ಸಾಂಕ್ರಾಮಿಕವನ್ನು ನಿಧಾನವಾಗಿ ಕೊನೆಗೊಳಿಸುತ್ತದೆ ಎಂದಿದ್ದಾರೆ.
ನೀವು ಯಾರೇ ಆಗಿರಲಿ, ನೀವು ಎಲ್ಲಿಯೇ ವಾಸಿಸುತ್ತಿರಲಿ, ಎಲ್ಲಿಯವರೆಗೆ ಈ ವೈರಸ್ ಹರಡುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರೂ ಅಪಾಯದಲ್ಲಿಯೇ ಇರುತ್ತೇವೆ. ಅಲ್ಲದೇ ಈ ಕೆಟ್ಟ ಪರಿಸ್ಥಿತಿಗೆ ನಾವು ನಮ್ಮನ್ನು ತಯಾರಿ ನಡೆಸುತ್ತಲೇ ಇರಬೇಕು ಎಂದು ಪಶ್ಚಿಮ ಪೆಸಿಫಿಕ್ನ ಆರೋಗ್ಯ ಸಂಸ್ಥೆಯ(WHO) ಪ್ರಾದೇಶಿಕ ನಿರ್ದೇಶಕ ತಕೇಶಿ ಕಸಾಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಖಾಸಗಿ ಮಾಧ್ಯಮವೊಂದು ಮಾಹಿತಿ ನೀಡಿದೆ.
ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆತಂಕ ಮತ್ತು ಅನಿಶ್ಚಿತತೆಗಳ ಹೊರತಾಗಿಯೂ, ನಿಮಗಾಗಿ ಮತ್ತು ನಿಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರಿಗೂ ಸೋಂಕನ್ನು ತಪ್ಪಿಸಲು ನೀವು ಎಲ್ಲ ಸಹಾಯ ಮಾಡಿ ಎಂದು 40 ವರ್ಷದೊಳಗಿನ ಕಿರಿಯ ಮತ್ತು ಸಾಮಾಜಿಕವಾಗಿ ಸಕ್ರಿಯವಾಗಿರುವ ಜನರಿಗೆ ಕಸಾಯಿ ಈ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕೆ 'ವಾಶ್' ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ
ಸುಮಾರು ಒಂದು ವರ್ಷದಿಂದ ಹಗಲು ರಾತ್ರಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರ ಬಗ್ಗೆ ಯೋಚಿಸಬೇಕು, ಅವರು ಜನಸೇವೆಯಲ್ಲಿ ತೊಡಗಿ ದಣಿದಿದ್ದಾರೆ, ಅವರಿಗೆ ನೆರವಾಗಿ ಸಹಾಯ ಮಾಡಿ ಎಂದು ತಕೇಶಿ ಯುವಕರನ್ನು ಒತ್ತಾಯಿಸಿದ್ದಾರೆ.
ಕೋವಿಡ್ -19 ಲಸಿಕೆಗಳು ತಕ್ಷಣಕ್ಕೆ ಪರಿಣಾಮ ತೋರಿ ಮ್ಯಾಜಿಕ್ ಮಾಡಲು ಬೆಳ್ಳಿಯ ಗುಂಡು(ಸಿಲ್ವರ್ ಬುಲೆಟ್)ಗಳಲ್ಲ. ಆದರೆ ಮುಂದಿನ ದಿನಗಳಲ್ಲಿ ಅದು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವುದು ಮಾತ್ರ ಸತ್ಯ. ನಾವು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಆದರೆ ಅವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದು ಹಾಗೂ ಅಗತ್ಯವಿರುವ ಎಲ್ಲರಿಗೂ ಅದು ತಲುಪುವಂತೆ ನೋಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ ಎಂದು ಕಸಾಯಿ ಹೇಳಿದರು.
ಇದನ್ನೂ ಓದಿ: ಅಮೆರಿಕದಲ್ಲಿ ಬಳಕೆಯ ಹೊಸ್ತಿಲಲ್ಲಿ ಮೊಡೆರ್ನಾ ಲಸಿಕೆ: ಶೀಘ್ರದಲ್ಲೇ ಒಪ್ಪಿಗೆ ಸಾಧ್ಯತೆ
ಬರುತ್ತಿರುವ ಲಸಿಕೆ ಆರಂಭದಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿರುತ್ತವೆ. ಹಾಗಾಗಿ ಅದನ್ನು ಅಗತ್ಯವಿರುವವರಿಗೆ, ಹೆಚ್ಚು ಅಪಾಯದಲ್ಲಿರುವ ಗುಂಪುಗಳಿಗೆ ಮೊದಲು ಆದ್ಯತೆ ನೀಡಿ ಹಂಚಬೇಕು ಎಂದರು.
ಈ ಸಾಂಕ್ರಾಮಿಕದ ತಡೆಗಟ್ಟುವಿಕೆ ನಮ್ಮಲ್ಲೇ ಇದೆ. ಸ್ಯಾನಿಟೈಸರ್ನಿಂದ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ದೈಹಿಕ ಅಂತರವಿರುವುದು ಹಾಗೂ ಹೆಚ್ಚಿನ ಪ್ರಸರಣ ಹೊಂದಿರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದರ ಮೂಲಕ ನಾವು ಜಾಗೃತರಾಗಿರಬೇಕು ಎಂದು ಕಸಾಯಿ ಮನವಿ ಮಾಡಿಕೊಂಡಿದ್ದಾರೆ.
ಸಿಲ್ವರ್ ಬುಲೆಟ್ ಎಂದರೇನು?: ವಿಶೇಷವಾಗಿ ಮಾಂತ್ರಿಕ ಆಯುಧವಾಗಿ ಕಾರ್ಯನಿರ್ವಹಿಸುವಂತಹದ್ದು ಅಥವಾ ದೀರ್ಘಕಾಲದ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವ ಸಾಧನವೇ ಈ ಸಿಲ್ವರ್ ಬುಲೆಟ್.