ವಿಂಡ್ಸರ್( ಇಂಗ್ಲೆಂಡ್) : ಆಡಳಿತಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ವಿದೇಶ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಣಿ ಎಲಿಜಬೆತ್-II ಅವರ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ನಿನ್ನೆ ಮಧ್ಯಾಹ್ನ ಅಮೆರಿಕದ ಮೊದಲ ಮಹಿಳೆ ಜಿಲ್ ಬೈಡನ್ ಜೊತೆ ಆಗಮಿಸಿದ ಅಧ್ಯಕ್ಷ ಬೈಡನ್, ವಿಂಡ್ಸರ್ ಕ್ಯಾಸೆಲ್‌ನಲ್ಲಿರುವ ರಾಜಮನೆತನದ ರಾಯಲ್ ನಿವಾಸದಲ್ಲಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದರು.
ಲಂಡನ್‌ನಲ್ಲಿ ನಡೆಯುತ್ತಿರುವ 3 ದಿನಗಳ ಶೃಂಗಸಭೆಗಾಗಿ ನೈರುತ್ಯ ಇಂಗ್ಲೆಂಡ್‌ನ ಕಾರ್ನವಾಲ್‌ಗೆ ಬೈಡನ್ ದಂಪತಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಕ್ಯಾಸೆಲ್‌ನ ನಿವಾಸಕ್ಕೆ ಆತಿಥಿಗಳನ್ನು 95 ವರ್ಷದ ರಾಣಿ ಎಲಿಜಬೆತ್ ಖುದ್ದಾಗಿ ಬರಮಾಡಿಕೊಂಡರು. ಬಳಿಕ ಸೇನೆಯ ಗೌರವಗಳೊಂದಿಗೆ ರಾಯಲ್ ಸ್ವಾಗತ ನೀಡಲಾಯಿತು. ನಗು ಮೊಗದಲ್ಲೇ ಬೈಡನ್ ಸೇನಾ ಗೌರವ ಸ್ವೀಕರಿಸಿದರು. ಬಳಿಕ ಅಮೆರಿಕದ ರಾಷ್ಟ್ರಗೀತೆ ಮೊಳಗಿತು. ನಿವಾಸದ ಒಳಗಡೆ ಹೋದ ಬಳಿಕ ರಾಣಿಯೊಂದಿಗೆ ಖಾಸಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಮಗ್ರ ಸಹಭಾಗಿತ್ವಕ್ಕಾಗಿ ಭಾರತ-ಕೀನ್ಯಾ ಚರ್ಚೆ ಫಲಪ್ರದ; ಎಸ್. ಜೈಶಂಕರ್
ಈ ವೇಳೆ ಪ್ರತಿಕ್ರಿಯಿಸಿದ ಯುಎಸ್ ಅಧ್ಯಕ್ಷ ಜೋ ಬೈಡನ್, ತುಂಬಾ ಕೃಪೆಯ ರಾಣಿ ಎಲಿಜಬೆತ್ ಅವರನ್ನು ನೋಡಿದಾಗ ತಮ್ಮ ತಾಯಿಯ ನೆನಪಾಯಿತು ಎಂದಿದ್ದಾರೆ.
ರಾಜಮನೆತನ ರಾಣಿಯನ್ನು ಭೇಟಿ ಮಾಡಿದ 13ನೇ ಅಮೆರಿಕದ ಅಧ್ಯಕ್ಷಕರು ಎಂಬ ಗೌರವಕ್ಕೆ ಬೈಡನ್ ಪಾತ್ರರಾದರು. ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಮಾತ್ರ ಇಲ್ಲಿಗೆ ಭೇಟಿ ನೀಡಿದ್ರೂ ರಾಣಿ ಅವರ ಆತಿಥ್ಯ ಸ್ವೀಕರಿಸಿರಲಿಲ್ಲ. ವಿಂಡ್ಸರ್ ಕ್ಯಾಸೆಲ್‌ನಲ್ಲಿ ರಾಣಿ ಎಲಿಜಬೆತ್-2 ಈವರೆಗೆ ನಾಲ್ವರು ಯುಎಸ್ ಅಧ್ಯಕ್ಷರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಆತಿಥ್ಯ ನೀಡಿದ್ದಾರೆ. 2018ರಲ್ಲಿ ಡೊನಾಲ್ಡ್ ಟ್ರಂಪ್, 2016ರಲ್ಲಿ ಬರಾಕ್ ಒಬಾಮ, 2008ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ಹಾಗೂ 1982ರಲ್ಲಿ ರೊನಾಲ್ಡ್ ರೇಗನ್ ಅವರಿಗೆ ಆತಿಥ್ಯ ನೀಡಿದ್ದರು.