ಟೋಕಿಯೋ(ಜಪಾನ್): ಪ್ರಧಾನ ಮಂತ್ರಿ ಸ್ಥಾನಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡಿದ ಬಳಿಕ, ಜಪಾನ್ನಲ್ಲಿ ಪ್ರಧಾನಿ ಸ್ಥಾನಕ್ಕೆ ಆಡಳಿತರೂಢ ಪಕ್ಷದ ನೂತನ ನಾಯಕ ಯೋಶಿಹಿದೆ ಸುಗಾ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಜಪಾನ್ನ ಆಡಳಿತರೂಢ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನೂತನ ಸಾರಥಿಯಾಗಿ ಯೋಶಿಹಿದೆ ಆಯ್ಕೆಗೊಂಡಿದ್ದಾರೆ. ಕಳೆದ ತಿಂಗಳು ಅನಾರೋಗ್ಯದ ನಿಮಿತ್ತ ಹಾಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಉತ್ತರಾಧಿಕಾರಿಯಾಗಿ ಸುಗಾ ಆಯ್ಕೆಯಾಗಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸುಗಾ ಅವರಿಗೆ 377 ಮತಗಳು ಲಭಿಸಿದ್ದು, ಇವರ ಇಬ್ಬರು ಪ್ರತಿಸ್ಪರ್ಧಿಗಳಿಗೆ 157 ಮತಗಳು ಬಂದವು. ಸದ್ಯ ಸುಗಾ ಪಕ್ಷದ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದೇ ಬುಧವಾರ ಜಪಾನ್ ಸಂಸತ್ತಿನಲ್ಲಿ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಸಂಸತ್ತಿನಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತವಿರುವುದರಿಂದ ಸುಗಾ ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.
ಪಕ್ಷದಲ್ಲಿ ಯೋಶಿಹಿದೆ ಸುಗಾಗೆ ಉತ್ತಮ ಬೆಂಬಲವಿದೆ. ಅಲ್ಲದೆ ಶಿಂಜೋ ಅಬೆ ಜೊತೆಗೆ ಕಳೆದ ಹತ್ತು ವರ್ಷಗಳಿಂದ ಉತ್ತಮ ಒಡನಾಟ ಹೊಂದಿರುವ ಸುಗಾ, ಅವರ ಉತ್ತರಾಧಿಕಾರಿಯಾಗಲು ಸಮರ್ಥ ವ್ಯಕ್ತಿ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೆ ಅಬೆ ಆಡಳಿತದಲ್ಲಿದ್ದಾಗ ಸರ್ಕಾರದ ನೀತಿ ನಿರೂಪಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ ಸುಗಾ, ಅವರ ಕಾಲದ ಕಾನೂನುಗಳನ್ನು ಮುಂದುವರಿಸುವ ಭರವಸೆ ಇದೆ.