ಕಠ್ಮಂಡು : ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸಲು ಮತ್ತು ನೇಪಾಳದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಒಲಿ ಹೇಳಿದ್ದಾರೆ.
ಈ ಬಗ್ಗೆ ಕಳೆದ ಶುಕ್ರವಾರ ಮಾತನಾಡಿರುವ ಅವರು, ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಮತ್ತು ಪಕ್ಷದ ನಾಯಕರು ದೇಶದ ಆಂತರಿಕ ವಿಷಯಗಳು ಮತ್ತು ಎಲ್ಲಾ ವಿವಾದಗಳನ್ನು ಬಗೆಹರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಒಲಿ ಅವರ ಕಾರ್ಯವೈಖರಿ ಮತ್ತು ಭಾರತ ವಿರೋಧಿ ಹೇಳಿಕೆಗಳಿಗಾಗಿ ರಾಜೀನಾಮೆಗೆ ಭಾರಿ ಒತ್ತಾಯ ಕೇಳಿ ಬರುತ್ತಿದೆ. ಈ ನಡುವೆ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಕರೆಯಲಾಗಿದ್ದ ಕಮ್ಯುನಿಸ್ಟ್ ಪಕ್ಷದ ನಿರ್ಣಾಯಕ ಸಭೆಯನ್ನು ದೇಶದಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ಶುಕ್ರವಾರ 4ನೇ ಬಾರಿಗೆ ಮುಂದೂಡಲಾಗಿದೆ.
ನೇಪಾಳ ಕಮ್ಯುನಿಸ್ಟ್ ಪಕ್ಷದ 45 ಸದಸ್ಯರ ಪ್ರಬಲ ಸ್ಥಾಯಿ ಸಮಿತಿಯ ಸಭೆ ಶುಕ್ರವಾರ ನಡೆಯಬೇಕಿತ್ತು. ಆದರೆ, ಅದನ್ನು ಕೊನೆಯ ಕ್ಷಣದಲ್ಲಿ ಒಂದು ವಾರ ಮುಂದೂಡಲಾಯಿತು. ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಒಲಿ, ರಾಜಕೀಯ ಪಕ್ಷದೊಳಗೆ ಇಂತಹ ಚರ್ಚೆಗಳು ಮತ್ತು ವ್ಯತ್ಯಾಸಗಳು ಸಾಮಾನ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸಲು ಹಾಗೂ ದೇಶದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.