ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಅಮೆರಿಕ ತನ್ನ ಸೇನೆಯನ್ನು ಹಿಂಪಡೆದು 20 ವರ್ಷಗಳ ಸುದೀರ್ಘ ಯುದ್ಧ ಅಂತ್ಯಗೊಳಿಸಿದ ಬೆನ್ನಲ್ಲೇ ಪ್ರಸ್ತುತ ಭಾರತದ ಅಧ್ಯಕ್ಷತೆಯಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ನಿರ್ಣಯ ಅಂಗೀಕರಿಸಿದೆ. ಯುದ್ಧ ಹಾಗೂ ಹಾನಿಗೊಳಗಾದ ದೇಶವನ್ನು ಯಾವುದೇ ರಾಷ್ಟ್ರಕ್ಕೆ ಬೆದರಿಕೆ ಹಾಕುವುದು ಅಥವಾ ದಾಳಿಗೆ ರಾಷ್ಟ್ರವನ್ನು ಬಳಸಬಾರಬಾರದು ಎಂದು ಎಚ್ಚರಿಸಿದೆ.
ಅಮೆರಿಕ, ಬ್ರಿಟನ್, ಫ್ರಾನ್ಸ್ ಈ ನಿರ್ಣಯ ಮಂಡಿಸಿದ್ದು, 13 ಕೌನ್ಸಿಲ್ ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ ನಂತರ ಅಂಗೀಕರಿಸಲಾಯಿತು. ಆದರೆ ಭದ್ರತಾ ಮಂಡಳಿಯ ಖಾಯಂಸದಸ್ಯ ರಾಷ್ಟ್ರಗಳಾಗಿರುವ ರಷ್ಯಾ ಮತ್ತು ಚೀನಾ ಮತದಾನದಿಂದ ದೂರ ಉಳಿದಿದ್ದವು.
ಅಫ್ಘಾನ್ ನೆಲವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ಬೇರೆ ಯಾವುದೇ ದೇಶದ ಮೇಲೆ ದಾಳಿ ಮಾಡಲು ಇಲ್ಲವೇ ಭಯೋತ್ಪಾದಕರಿಗೆ ಆಶ್ರಯ ನೀಡಲು ಹಾಗೂ ತರಬೇತಿ ನೀಡಲು ಬಳಸಬಾರದು ಎಂದು ನಿನ್ನೆ ಕೈಗೊಂಡಿರುವ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಸುದೀರ್ಘ ಎರಡು ದಶಕಗಳ ಯುದ್ಧದ ನಂತರ ಯುಎಸ್ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡ ಎರಡು ವಾರಗಳ ಬಳಿಕ ಉಗ್ರ ಸಂಘಟನೆ ತಾಲಿಬಾನ್ ಆಗಸ್ಟ್ 15 ರಂದು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿತ್ತು. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದು ಯುಎಇಗೆ ಪಲಾಯನ ಮಾಡಿದ್ದರು. ಸರ್ಕಾರ ಪತನಗೊಳ್ಳುತ್ತಿದ್ದಂತೆ ಸಾವಿರಾರು ಜನರು ರಾಜಧಾನಿ ಕಾಬೂಲ್‌ನತ್ತ ಧಾವಿಸಿ ಬಂದು ಬೇರೆ ಬೇರೆ ದೇಶಗಳಿಗೆ ತೆರಳಲು ಪ್ರಯತ್ನಗಳನ್ನು ಮಾಡಿದರು. ಈ ಸಾವು ಬದುಕಿನ ಹೋರಾಟದಲ್ಲಿ ಕೆಲವರು ಯಶಸ್ವಿಯಾದರೆ ಬಹುತೇಕರು ವಿಫಲವಾಗಿದ್ದಾರೆ.
ಇದನ್ನೂ ಓದಿ: ಭಾರತದ ಜೊತೆಗಿನ ಸಂಬಂಧ ಉಳಿಸಿಕೊಳ್ಳಲು ಬಯಸುತ್ತೇವೆ: ತಾಲಿಬಾನ್