ಕಾಬೂಲ್(ಅಫ್ಘಾನಿಸ್ತಾನ): ಅಫ್ಘನ್ ಸೇನೆಯ ಜೊತೆಗೆ ಅಲ್ಲಿನ ಸ್ಥಳೀಯರು ಕೂಡಾ ಕೈಜೋಡಿಸಿದ ಕಾರಣದಿಂದ ಸ್ವಲ್ಪ ದಿನಗಳ ಹಿಂದೆ ಹಿನ್ನೆಡೆಗೆ ಒಳಗಾಗಿದ್ದ ತಾಲಿಬಾನ್ ಪಡೆಗಳು ಈಗ ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಅನ್ನು ಕೂಡಾ ವಶಕ್ಕೆ ಪಡೆದಿವೆ.
ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳಲ್ಲಿ ಕಂದಹಾರ್ 12ನೇ ಪ್ರಾಂತೀಯ ರಾಜಧಾನಿಯಾಗಿದೆ. ಈ ಮೂಲಕ ತಾಲಿಬಾನಿಗಳು ಅಫ್ಘಾನಿಸ್ತಾನದ ಬಹುಭಾಗವನ್ನು ಈಗಾಗಲೇ ಆವರಿಸಿದ್ದಾರೆ ಎಂದೇ ಹೇಳಬೇಕು. ಈ ಬೆನ್ನಲ್ಲೇ ಅಲ್ಲಿನ ಸರ್ಕಾರವ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡುತ್ತಿದೆ.
![Taliban take another Afghan provincial capital, Kandahar](https://etvbharatimages.akamaized.net/etvbharat/prod-images/12756651_thumb.jpg)
ಗುರುವಾರ ರಾತ್ರಿ ಕಂದಹಾರ್ ವಶಕ್ಕೆ ಪಡೆಯಲಾಗಿದ್ದು, ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ತಾಲಿಬಾನಿಗಳಿಂದ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲು ವಿಮಾನದ ಮೂಲಕ ಬೇರೆಡೆಗೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ದೊರತಿದೆ.
ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರ ಮತ್ತು ಕಾಬೂಲ್ಗೆ ಅತ್ಯಂತ ಸಮೀಪದ ಪ್ರಾಂತೀಯ ರಾಜಧಾನಿಯಾದ ಹೆರಾತ್ ಅನ್ನೂ ತಾಲಿಬಾನ್ ವಶಪಡಿಸಿಕೊಂಡಿದೆ. ಅಮೆರಿಕದ ಮಿಲಿಟರಿ ಪಡೆಗಳು ಹೊರಡುವ ಮೊದಲೇ ತಾಲಿಬಾನಿಗಳ ಅತಿಕ್ರಮಣ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
![Taliban take another Afghan provincial capital, Kandahar](https://etvbharatimages.akamaized.net/etvbharat/prod-images/12756651_thumbngg.jpg)
ಒಟ್ಟು 34 ಪ್ರಾಂತೀಯ ರಾಜಧಾನಿಗಳಲ್ಲಿ 11 ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದು, ಹೆರಾತ್ನಲ್ಲಿರುವ ಐತಿಹಾಸಿಕ ಮಸೀದಿ 'ಗ್ರೇಟ್ ಮಸೀದಿ' (Great Mosque)ಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈ ಮಸೀದಿಯು ಕ್ರಿ.ಪೂ 500ನೇ ವರ್ಷಕ್ಕಿಂತ ಹಿಂದಿನದ್ದಾಗಿದ್ದು, ಅಲೆಕ್ಸಾಂಡರ್ನಿಂದ ಹಾನಿಗೊಳಗಾಗಿತ್ತು.ಅಲ್ಲಿನ ಸರ್ಕಾರಿ ಕಟ್ಟಡಗಳೂ ತಾಲಿಬಾನಿಗಳಿಗೆ ವಶವಾಗಿವೆ.
ಘಜ್ನಿಯ ಮೇಲೆ ತಾಲಿಬಾನಿ ಉಗ್ರರು ಹಿಡಿತ ಸಾಧಿಸಿದ್ದಾರೆ. ಇದರಿಂದಾಗಿ ಕಾಬೂಲ್ ಮತ್ತು ಇತರ ದಕ್ಷಿಣ ಪ್ರಾಂತ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡಾ ಅವರ ವಶವಾಗಿದೆ. ಈಗ ಅಫ್ಘನ್ ರಾಜಧಾನಿ ತಾಲಿಬಾನ್ ಮೇಲೆ ಸಾಕಷ್ಟು ಒತ್ತಡ ಬಿದ್ದಿದ್ದು, ಸರ್ಕಾರಿ ಪಡೆಗಳು ತಾಲಿಬಾನಿಗಳನ್ನು ಎದುರಿಸಲು ಸದಾ ಸಿದ್ಧವಾಗಿವೆ.
ತಾಲಿಬಾನಿಗಳು ಈಗ ದೇಶದ ಮೂರನೇ ಎರಡರಷ್ಟು ಭಾಗವನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ ಮತ್ತು ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರಿ ಪಡೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಾಲಿಬಾನ್ನಿಂದ ಅಫ್ಘನ್ ಸರ್ಕಾರ ಮರುವಶಕ್ಕೆ ಪಡೆದುಕೊಂಡ ನಗರಗಳೂ ಮತ್ತೆ ತಾಲಿಬಾನಿಗಳ ವಶವಾಗಿವೆ. ಈ ಬೆಳವಣಿಗೆ ಅಲ್ಲಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
![Taliban take another Afghan provincial capital, Kandahar](https://etvbharatimages.akamaized.net/etvbharat/prod-images/12756651_th.jpg)
ಅಮೆರಿಕ ಪೂರ್ಣವಾಗಿ ಜಾಗ ಖಾಲಿ ಮಾಡಲು ಕಾಯುತ್ತಿದೆ ತಾಲಿಬಾನ್
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್ ಇನ್ನೂ ಆಕ್ರಮಣ ಮಾಡಿಲ್ಲ. ಕಾಬೂಲ್ನಲ್ಲಿರುವ ರಾಯಭಾರ ಕಚೇರಿಯನ್ನು ತೊರೆಯುವ ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದೆ. ಅಮೆರಿಕ ತನ್ನ ರಾಯಭಾರ ಕಚೇರಿಯನ್ನು ತೊರೆದ ಮೇಲೆ ಕಾಬೂಲ್ಗೆ ಮತ್ತಷ್ಟು ಆತಂಕ ಎದುರಾಗಬಹುದು.
![Taliban take another Afghan provincial capital, Kandahar](https://etvbharatimages.akamaized.net/etvbharat/prod-images/12756651_thumbnai.jpg)
ರಾಯಭಾರ ಕಚೇರಿ ಮುಚ್ಚಲು ಅಮೇರಿಕ ನಿರ್ಧಾರ
ರಾಯಭಾರ ಕಚೇರಿ ತೊರೆಯುವ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬಿ, ಮುಂದಿನ ಎರಡು ದಿನಗಳಲ್ಲಿ ಒಂದು ಸೇನಾ ಬೆಟಾಲಿಯನ್ ಮತ್ತು ಎರಡು ನೌಕಾ ಬೆಟಾಲಿಯನ್ ಅನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಮೂರು ಸಾವಿರ ಸೈನಿಕರುಳ್ಳ ಈ ಪಡೆಗಳು ರಾಯಭಾರ ಕಚೇರಿಯ ಸಿಬ್ಬಂದಿಗೆ ಅಫ್ಘಾನಿಸ್ತಾನ ತೊರೆಯಲು ಸಹಕಾರ ನೀಡುತ್ತವೆ ಎಂದಿದ್ದಾರೆ.
ಬ್ರಿಟನ್ ಪ್ರಜೆಗಳ ರಕ್ಷಣೆಗೆ ವಿಶೇಷ ವ್ಯವಸ್ಥೆ
ಇಂಗ್ಲೆಂಡ್ ಕೂಡಾ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಬ್ರಿಟನ್ ಪ್ರಜೆಗಳ ರಕ್ಷಣೆಗಾಗಿ ಮತ್ತು ಅವರು ಅಫ್ಘಾಸ್ತಾನವನ್ನು ಸುರಕ್ಷಿತವಾಗಿ ತೊರೆಯಲು ಸಾಧ್ಯವಾಗುವಂತೆ 600 ಮಂದಿ ಸೈನಿಕರನ್ನು ಅಪ್ಘನ್ಗೆ ಕಳುಹಿಸುವ ಮಾತನಾಡಿದೆ.
ಮಹಿಳಾ ಹಕ್ಕುಗಳ ದಮನ ಸೇರಿದಂತೆ ಕ್ರೂರ ಮತ್ತು ದಮನಕಾರಿ ನೀತಿಯನ್ನು ತಾಲಿಬಾನ್ ಹೇರುತ್ತದೆ ಎಂಬ ಭಯದಿಂದಾಗಿ ಸಾವಿರಾರು ಮಂದಿ ತಮ್ಮ ನಿವಾಸಗಳನ್ನು ತೊರೆದಿದ್ದಾರೆ. ಸಾರ್ವಜನಿಕ ಅಂಗಚ್ಛೇದನ, ಕಲ್ಲೆಸೆತ ಮತ್ತು ಮರಣದಂಡನೆಯನ್ನು ವಿಧಿಸುವ ಭಯ ಅಲ್ಲಿನ ಜನರನ್ನು ಕಾಡುತ್ತದೆ.
ಕತಾರ್ ಶಾಂತಿ ಮಾತುಕತೆ ಸ್ಥಗಿತ ಪರಿಣಾಮ
ತಾಲಿಬಾನಿಗಳು ಮತ್ತು ಅಫ್ಘನ್ ಸರ್ಕಾರದ ನಡುವೆ ಕತಾರ್‌ನಲ್ಲಿ ಶಾಂತಿ ಮಾತುಕತೆಗಳು ಸ್ಥಗಿತಗೊಂಡಿದ್ದು, ಕೆಲವೇ ತಿಂಗಳಲ್ಲಿ ಇಡೀ ದೇಶ ಸಂಪೂರ್ಣವಾಗಿ ತಾಲಿಬಾನಿಗಳ ವಶವಾಗುವುದು ನಿಶ್ಚಿತ ಎಂಬ ಮಾತುಗಳು ಕೇಳಿಬಂದಿದ್ದು, ಅಫ್ಘನ್ ಸರ್ಕಾರ ಹತಾಶೆಯ ಸ್ಥಿತಿಯಲ್ಲಿದೆ.
ಇದನ್ನೂ ಓದಿ: ವಧುವನ್ನು ಚಿನ್ನದಿಂದ ಅಲಂಕರಿಸುವ ಜಾಹೀರಾತುಗಳು ಬೇಡ: ಕೇರಳ ರಾಜ್ಯಪಾಲರ ಕಳಕಳಿ