ಕಾಬೂಲ್: ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ತಾಲಿಬಾನ್ ರಾಜಕೀಯ ಮತ್ತು ಮಿಲಿಟರಿ ತಂತ್ರಗಾರ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಫ್ಘಾನ್ ಸರ್ಕಾರ ಪತನದ ನಂತ್ರ ಮತ್ತೆ ಸಕ್ರಿಯನಾಗಿದ್ದಾನೆ. ತಾಲಿಬಾನ್‌ನ ಸಹ ಸಂಸ್ಥಾಪಕನೂ ಆಗಿರುವ ಘನಿ, ದೋಹಾ ಶಾಂತಿ ಒಪ್ಪಂದದಲ್ಲಿ ಪ್ರಮುಖ ಪಾತ್ರವಹಿಸಿದ್ದ. ಆ ಸಂದರ್ಭದಲ್ಲಿ ಆತ ಹಲವಾರು ದೇಶಗಳ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾನೆ.
ಸದ್ಯ ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ಅಲ್ಲಿನ ಪ್ರತಿ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವುದರ ಹಿಂದೆ ಬರದಾರ್ ತಂತ್ರಗಾರಿಕೆ ಇದೆ ಎನ್ನಲಾಗುತ್ತಿದೆ. ಅಫ್ಘಾನ್ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ನಿನ್ನೆ ಕತಾರ್‌ನಿಂದ ಅಫ್ಘಾನಿಸ್ತಾನಕ್ಕೆ ಈತ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ, ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್‌ಥಾನಿ ಮತ್ತು ಬರದಾರ್ ನಡುವೆ ಪ್ರಮುಖ ಸಭೆ ನಡೆದಿದೆ. ಅಫ್ಘಾನಿಸ್ತಾನದ ಇತ್ತೀಚಿನ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ತಾಲಿಬಾನಿಗೆ ಸವಾಲೊಡ್ಡುವ ಹಲವಾರು ಸಮಸ್ಯೆಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಪ್ರಯಾಣಿಸಿದ ಜನ!- ವಿಡಿಯೋ ನೋಡಿ
ಮುಖ್ಯವಾಗಿ ಅಧಿಕಾರ ವರ್ಗಾವಣೆಯನ್ನು ಶಾಂತಿಯುತವಾಗಿ ಪೂರ್ಣಗೊಳಿಸುವುದು, ಜನರಿಗೆ ರಕ್ಷಣೆ ಮತ್ತು ಭರವಸೆ ನೀಡುವುದು, ಹೊಸ ಸರ್ಕಾರವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಗುರುತಿಸುವಂತೆ ಮಾಡುವಂತಹ ವಿಚಾರಗಳ ಬಗ್ಗೆ ಇಬ್ಬರ ನಡುವೆ ಚರ್ಚೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
2020ರಲ್ಲಿ ಅಮೆರಿಕದ ಟ್ರಂಪ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಮೈಕ್ ಪ್ಯಾಂಪಿಯೋ ಮುಲ್ಲಾ ಅಬ್ದುಲ್ ಘನಿ ಬರ್ದಾರ್‌ನನ್ನು ಭೇಟಿಯಾಗಿದ್ದರು. ಇದೀಗ 2021ರಲ್ಲಿ ಮುಲ್ಲಾ ನಾಯಕತ್ವದಲ್ಲಿ ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಲಿದೆ.