ಸಿಯೋಲ್: ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಪ್ರಚಾರ ಕರಪತ್ರಗಳನ್ನು ಹಾರಿಬಿಡುವ ಉತ್ತರ ಕೊರಿಯಾದ ಕ್ರಮವನ್ನು ಖಂಡಿಸಿದ ದ.ಕೊರಿಯಾ ಆ ಯೋಜನೆಯನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದೆ. ಉ.ಕೊರಿಯಾ ಈಗಾಗಲೇ ಸುಮಾರು 12 ಮಿಲಿಯನ್ ಕರಪತ್ರಗಳ ಹಂಚಿಕೆಗೆ ಸಿದ್ಧವಾಗಿದ್ದು, ದಕ್ಷಿಣದ ವಿರುದ್ಧ ಮಾನಸಿಕ ಅಭಿಯಾನವನ್ನು ಶುರು ಹಚ್ಚುವಲ್ಲಿ ಕಾತುರದಲ್ಲಿತ್ತು.
ಕಳೆದ ವಾರ ಉತ್ತರ ಕೊರಿಯಾ ದಕ್ಷಿಣದ ಭೂಪ್ರದೇಶದ ಸಂಪರ್ಕ ಕಚೇರಿಯನ್ನು ನಾಶಪಡಿಸಿದ ನಂತರದಲ್ಲಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ವ್ಯಾಪಕವಾಗಿ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡಿತ್ತು. ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಪ್ರಚಾರದ ಕರಪತ್ರಗಳನ್ನು ಹಾರಿಸುವುದಾಗಿ ಮತ್ತು 2018 ರ ಒಪ್ಪಂದಗಳನ್ನು ರದ್ದುಗೊಳಿಸಲು ಇತರ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಉತ್ತರ ಕೊರಿಯಾ ಹೇಳಿದೆ.
ಸಿಯೋಲ್‌ನ ಏಕೀಕರಣ ಸಚಿವಾಲಯದ ವಕ್ತಾರ ಯೋಹ್ ಸಾಂಗ್ಕಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉತ್ತರ-ಕೊರಿಯಾವು ದಕ್ಷಿಣ-ಉತ್ತರ ಸಂಬಂಧಗಳಿಗೆ ಸಹಕಾರಿಯಾಗದ ಸಿಯೋಲ್ ವಿರೋಧಿ ಕರಪತ್ರಗಳನ್ನು ಕಳುಹಿಸುವ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದರು.
3 ಸಾವಿರ ಆಕಾಶಬುಟ್ಟಿಗಳು ಮತ್ತು ಇತರ ಅನಿರ್ದಿಷ್ಟ ವಿತರಣಾ ಸಾಧನಗಳಲ್ಲಿ ದಕ್ಷಿಣ ಕೊರಿಯಾ ಕಡೆಗೆ ತೇಲುವಂತೆ 12 ಮಿಲಿಯನ್ ಪ್ರಚಾರ ಕರಪತ್ರಗಳನ್ನು ತಯಾರಿಸಿದ್ದಾಗಿ ಉತ್ತರ ಕೊರಿಯಾ ಸೋಮವಾರ ತಿಳಿಸಿದೆ.
ಪ್ರತೀಕಾರದ ಶಿಕ್ಷೆಯ ಸಮಯ ಹತ್ತಿರವಾಗುತ್ತಿದೆ. ಶತ್ರುಗಳ ವಿರುದ್ಧ ಕರಪತ್ರಗಳನ್ನು ವಿತರಿಸುವ ನಮ್ಮ ಯೋಜನೆಯು ದೇಶದ ಜನರು ಮತ್ತು ಇಡೀ ಸಮಾಜದ ಕೋಪದ ಸ್ಫೋಟವಾಗಿದೆ, ಎಂದು ಉತ್ತರದ ಕೊರಿಯಾದ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆ ಹೇಳಿದೆ.
ಇನ್ನು ಕೆಲ ಮಂದಿ ಪ್ರಕಾರ, ಸದ್ಯದ ಹವಾಮಾನ ಪರಿಸ್ಥಿತಿಯು ಉತ್ತರ ಕೊರಿಯಾವು ದಕ್ಷಿಣಕ್ಕೆ ಪ್ರಚಾರದ ಆಕಾಶಬುಟ್ಟಿಗಳನ್ನು ಹಾರಿಸಲು ಅನುಕೂಲಕರವಾಗಿಲ್ಲ, ಆದ್ದರಿಂದ ಅವುಗಳನ್ನು ಉಡಾಯಿಸಲು ಡ್ರೋನ್‌ಗಳನ್ನು ಬಳಸಬಹುದು. ಆದರೆ ತನ್ನ ಪ್ರದೇಶಕ್ಕೆ ಒಳಬರುವ ಡ್ರೋನ್‌ಗಳ ಬಗ್ಗೆ ಕೊರಿಯಾಗಳ ನಡುವೆ ಘರ್ಷಣೆಯನ್ನು ಉಂಟುಮಾಡಬಹುದು ಎಂದು ಅವರು ಹೇಳುತ್ತಾರೆ.
2018 ರಲ್ಲಿ, ಎರಡು ಕೊರಿಯಾದ ನಾಯಕರು ತಮ್ಮ ಗಡಿಯಲ್ಲಿ ಪರಸ್ಪರರ ವಿರುದ್ಧದ ಯಾವುದೇ ಕೃತ್ಯಗಳನ್ನು ಮಾಡುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದರು. ಇದರಲ್ಲಿ ಮಾನಸಿಕ ಯುದ್ಧಗಳಾದ ಕರಪತ್ರ ಮತ್ತು ಪ್ರಚಾರ ಪ್ರಸಾರಗಳು ಸೇರಿವೆ. ಆದರೆ ಅವರ ಆ ಒಪ್ಪಂದದಲ್ಲಿ ನಾಗರಿಕರ ಕರಪತ್ರಗಳನ್ನು ನಿಷೇಧಿಸಬಹುದೇ ಎಂದು ಸ್ಪಷ್ಟವಾಗಿ ಹೇಳಿರಲಿಲ್ಲ. ಹಾಗಾಗಿ ದಕ್ಷಿಣ ಕೊರಿಯಾದ ಕಾರ್ಯಕರ್ತರು ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಹಾಗೂ ಮಾನವ ಹಕ್ಕುಗಳ ದಾಖಲೆಯನ್ನು ಟೀಕಿಸುವ ಕರಪತ್ರಗಳನ್ನು ಹೊತ್ತ ಬೃಹತ್ ಆಕಾಶಬುಟ್ಟಿಗಳನ್ನು ಆ ಸಂದರ್ಭದಲ್ಲಿ ಉಡಾಯಿಸುತ್ತಿದ್ದರು. ಹಾಗಾಗಿ ಅಲ್ಲಿನ ನಾಗರಿಕರು ಈಗಲೂ ಅದೇ ಮಾರ್ಗವನ್ನು ಅನುಸರಿಸ ಹೊರಟಿದ್ದಾರೆ.