ಇಸ್ಲಾಮಾಬಾದ್(ಪಾಕಿಸ್ತಾನ): ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಆರೋಪದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಹರಿಪುರ ಜಿಲ್ಲೆಯಲ್ಲಿ ಸಿಖ್ ಸಮುದಾಯ ಸ್ಥಳೀಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ಸಿಖ್ ಖಾಲ್ಸಾ ಸೈನ್ಯದ ಪ್ರಮುಖರಾಗಿದ್ದ ಹರಿ ಸಿಂಗ್ ನಲ್ವಾ ಅವರ ಪ್ರತಿಮೆಯನ್ನು ಅಲ್ಲಿನ ಸ್ಥಳೀಯ ಸರ್ಕಾರ ತೆರವುಗೊಳಿಸಿದೆ. ಇದರಿಂದಾಗಿ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಖ್ಖರು ಪ್ರತಿಭಟನೆ ನಡೆಸುತ್ತಿದ್ದಾರೆ. 2017ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಸಿಖ್ ದೊರೆ ರಣಜಿತ್ ಸಿಂಗ್ ಅವರ ಸೇನೆಯ ಪ್ರಮುಖರಾಗಿದ್ದ ಹರಿ ಸಿಂಗ್ ನಲ್ವಾ, ರಣಜಿತ್ ಸಿಂಗ್ ಅವರ ದಿಗ್ವಿಜಯಗಳಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು. ಕನಿಷ್ಠ 20 ಯುದ್ಧಗಳಲ್ಲಿ ಇವರು ಭಾಗವಹಿಸಿದ್ದರು.
ಇದನ್ನೂ ಓದಿ: ಉಗ್ರರ ದಾಳಿ: ನಾಲ್ವರು ಸೈನಿಕರು ಮೃತ, 15 ಭಯೋತ್ಪಾದಕರ ಹತ್ಯೆ
ಕಸೂರ್, ಸಿಯಾಲ್‌ಕೋಟ್, ಅಟಾಕ್, ಮುಲ್ತಾನ್, ಕಾಶ್ಮೀರ, ಪೇಶಾವರ್ ಮತ್ತು ಜಮರುದ್ ಯುದ್ಧಗಳಲ್ಲಿ ಹರಿ ಸಿಂಗ್ ನಲ್ವಾ ನೇತೃತ್ವದಲ್ಲಿ ಗೆಲ್ಲಲಾಗಿತ್ತು ಎಂದು ಪಾಕಿಸ್ತಾನ್ ಟುಡೇ ವರದಿ ಮಾಡಿದೆ.
ಪ್ರತಿಮೆಯನ್ನು ಸ್ಥಾಪಿಸುವಾಗ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಇದು ಉತ್ತೇಜನ ನೀಡುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಪ್ರತಿಮೆ ಕೆಡವಿರುವ ಕಾರಣದಿಂದ ಸಿಖ್ ಸಮುದಾಯದ ಆಕ್ರೋಶ ಭುಗಿಲೆದ್ದಿದೆ.