ಮಾಸ್ಕೋ (ರಷ್ಯಾ): ಉದ್ವಿಗ್ನ ದ್ವಿಪಕ್ಷೀಯ ಸಂಬಂಧಗಳನ್ನು ಸರಿಪಡಿಸಲು ರಷ್ಯಾ ಮತ್ತು ಅಮೆರಿಕ ಪ್ರಯತ್ನಿಸಬೇಕು. ಅದು ಪ್ರಸ್ತುತ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಶುಕ್ರವಾರ 24ನೇ ಸೇಂಟ್ ಪೀಟರ್ಸ್ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್, ಜೂನ್ 16ರಂದು ಜಿನೀವಾದಲ್ಲಿ ನಡೆಯುವ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಕಾರ್ಯತಂತ್ರದ ಸ್ಥಿರತೆ, ಅಂತಾರಾಷ್ಟ್ರೀಯ ಸಂಘರ್ಷ ಇತ್ಯರ್ಥ, ಕೋವಿಡ್-19 ವಿರುದ್ಧದ ಸಹಕಾರ, ಶಸ್ತ್ರಾಸ್ತ್ರ ನಿಯಂತ್ರಣ, ಭಯೋತ್ಪಾದನಾ ವಿರೋಧಿ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚಿಸಲು ಯೋಜಿಸಲಾಗಿದೆ ಎಂದು ಹೇಳಿದರು.
"ಸ್ವಲ್ಪ ಮಟ್ಟಿಗೆ, ರಷ್ಯಾ - ಅಮೆರಿಕನ್ ಸಂಬಂಧಗಳು ಅಮೆರಿಕದಲ್ಲಿ ಆಂತರಿಕ ರಾಜಕೀಯ ಪ್ರಕ್ರಿಯೆಗಳಿಂದಾಗಿ ದುರ್ಬಲವಾಗಿದೆ. ಆದರೆ, ಇದು ಒಂದು ದಿನ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
"ಅಮೆರಿಕದಲ್ಲಿ ಪ್ರಸ್ತುತ ದೇಶೀಯ ರಾಜಕೀಯ ಪರಿಸ್ಥಿತಿಗಿಂತ ಭದ್ರತೆ, ಕಾರ್ಯತಂತ್ರದ ಸ್ಥಿರತೆ ಮತ್ತು ಶಸ್ತ್ರಾಸ್ತ್ರ ಕಡಿತ ಕ್ಷೇತ್ರಗಳಲ್ಲಿನ ಮೂಲಭೂತ ಹಿತಾಸಕ್ತಿಗಳು ಇನ್ನೂ ಮುಖ್ಯವಾಗಿದೆ" ಎಂದು ಅವರು ಹೇಳಿದರು.
ಉಕ್ರೇನ್, ಸೈಬರ್ ಸುರಕ್ಷತೆ, ಮಾನವ ಹಕ್ಕುಗಳು ಮತ್ತು ಅಮೆರಿಕ ಚುನಾವಣಾ ಹಸ್ತಕ್ಷೇಪಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಎರಡೂ ಕಡೆಯವರು ಸ್ಪಷ್ಟ ವ್ಯತ್ಯಾಸಗಳನ್ನು ಹೊಂದಿದ್ದಾರೆ.