ಲಾಹೋರ್ (ಪಾಕಿಸ್ತಾನ): 5 ವರ್ಷದ ಬಾಲಕನನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ನಾಲ್ವರು ಶಂಕಿತರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಉಮೈರ್ (18) ಮತ್ತು ಅಬ್ಬಾಸ್ (20) ಎಂಬ ಇಬ್ಬರು ವ್ಯಾಪಾರಿಗಳು ಲಾಹೋರ್‌ನಿಂದ 150 ಕಿ.ಮೀ ದೂರದಲ್ಲಿರುವ ಫೈಸಲಾಬಾದ್ ಎಂಬಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕನ್ನು ಅಪಹರಿಸಿದ್ದಾರೆ. ಇಬ್ಬರು ಶಂಕಿತರು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮತ್ತಿಬ್ಬರು ಸಹಚರರೊಂದಿಗೆ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅತ್ಯಾಚಾರ ಎಸಗಿದ ನಂತರ ಬಾಲಕನನ್ನು ಕೊಂದು, ದೇಹವನ್ನು ಎಸೆದುಹೋಗಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಪ್ರಕರಣ ಕೈಗೆತ್ತಿಕೊಂಡ ವಿಶೇಷ ಪೊಲೀಸ್ ತಂಡ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಆರೋಪಿಗಳನ್ನು ಸ್ಥಳ ಪರಿಶೀಲನೆಗೆ ಕರೆದೊಯ್ಯುವಾಗ ಎಂಟು ಜನ ಶಸ್ತ್ರಸಜ್ಜಿತ ವ್ಯಕ್ತಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಸ್ಪರ ಗುಂಡಿನ ಕಾಳಗದಲ್ಲಿ ನಾಲ್ವರು ಆರೋಪಿಗಳು ಸಾವನ್ನಪಿದ್ದಾರೆ. ರಾತ್ರಿಯಾಗಿದ್ದರಿಂದ ಶಸ್ತ್ರಸಜ್ಜಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.