ರಾಜಕೀಯದಲ್ಲಿ ತಮಗಾಗದವರನ್ನು ಸಂಪೂರ್ಣವಾಗಿ ಫಿನಿಷ್ ಮಾಡುವುದು ಬಹು ಹಿಂದಿನ ಕಾಲದಿಂದಲೇ ನಡೆದು ಬಂದಿದೆ. ತಮ್ಮ ಎದುರಾಳಿಗಳನ್ನು ಬಗ್ಗುಬಡಿಯಲು ರಾಜಕೀಯ ನಾಯಕರು ಹಲವಾರು ತಂತ್ರ ಕುತಂತ್ರಗಳನ್ನು ಅನುಸರಿಸುತ್ತಾರೆ. ತಮ್ಮ ವಿರೋಧಿಗಳನ್ನು ಯಾರಿಗೂ ಗೊತ್ತಾಗದಂತೆ, ಒಂದಿನಿತೂ ಯಾರಿಗೂ ಸಂಶಯ ಬಾರದಂತೆ ಕೊಲೆ ಮಾಡುವ ಕುತಂತ್ರವೇ ವಿಷವಿಕ್ಕುವುದು.
ಹೌದು.. ವಿರೋಧಿಗಳಿಗೆ ಗೊತ್ತಾಗದಂತೆ ಅವರ ದೇಹಕ್ಕೆ ವಿಷ ಸೇರುವಂತೆ ಮಾಡಿ ಅವರನ್ನು ಮುಗಿಸುವುದು ರಷ್ಯಾ ದೇಶದಲ್ಲಿ ದಶಕಗಳಿಂದ ನಡೆದು ಬಂದಿರುವ ಒಂದು ವ್ಯವಸ್ಥಿತ ಸಂಚಾಗಿದೆ. ರಷ್ಯಾದಲ್ಲಿ ಘಟಿಸಿದ ವಿಷಪಾತಕದ ರೋಚಕ ಘಟನಾವಳಿಗಳ ಒಂದು ವರದಿ ಇಲ್ಲಿದೆ..
ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನವಾಲ್ನಿ ಕೊಲೆ ಯತ್ನ
ವಿಷವಿಕ್ಕಿ ಕೊಲೆ ಮಾಡುವ ಇತಿಹಾಸ ನೋಡುವ ಮುನ್ನ ತೀರಾ ಮೊನ್ನೆಯ ಘಟನೆಯ ಬಗ್ಗೆ ಒಂದಿಷ್ಟು ತಿಳಿಯುವುದು ಅಗತ್ಯ. ರಷ್ಯಾದ ಪ್ರಸ್ತುತ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಡು ವಿರೋಧಿ ರಾಜಕೀಯ ಮುಖಂಡ ಅಲೆಕ್ಸಿ ನವಾಲ್ನಿ ಅವರನ್ನು ಕೊಲೆ ಮಾಡುವ ಯತ್ನ ಕಳೆದ ಎರಡು ದಿನಗಳ ಹಿಂದಷ್ಟೇ ನಡೆದಿದೆ. ಸದ್ಯ ಇವರು ವಿಷಪ್ರಾಶನದಿಂದ ಕೋಮಾದಲ್ಲಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯಲು ಸೈಬೀರಿಯಾದಿಂದ ಜರ್ಮನಿಗೆ ಅವರನ್ನು ಸ್ಥಳಾಂತರಿಸಲಾಗಿದೆ. ಬಹುಶಃ ವಿಷ ಬೆರೆಸಿದ ಚಹಾ ಕುಡಿದ ನಂತರ ನವಾಲ್ನಿ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ. ಜರ್ಮನಿಯ ಓಮ್ಸ್ಕ್ ನಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಲ್ನಿ ಬದುಕುಳಿಯುವುದು ಸಂಶಯ ಎನ್ನಲಾಗಿದೆ.
ಪ್ರಭುತ್ವ ವಿರೋಧಿಗಳಿಗೆ ವಿಷವಿಕ್ಕುವುದು ರಷ್ಯಾದ ಬಹು ಹಳೆಯ ತಂತ್ರ !
ಎರಡನೇ ಮಹಾಯುದ್ಧದ ಕಾಲದಿಂದಲೇ ರಷ್ಯಾದ ಗುಪ್ತಚರ ಸಂಸ್ಥೆ ಈ ರೀತಿ ರಾಜಕೀಯ ನಾಯಕರನ್ನು ವಿಷವುಣಿಸಿ ಕೊಲೆ ಮಾಡುವುದನ್ನು ಕರಗತ ಮಾಡಿಕೊಂಡಿದೆ ಎನ್ನಲಾಗುತ್ತದೆ. 1978 ರಲ್ಲಿ ಬಲ್ಗೇರಿಯಾದ ಬಂಡುಕೋರ ನಾಯಕ ಜಾರ್ಜಿ ಮಾರ್ಕೋವ್ ಅವರಿಗೆ ಲಂಡನ್ ವಾಟರ್ ಲೂ ಬ್ರಿಜ್ ಮೇಲೆ ಛತ್ರಿಯೊಂದರಿಂದ ಕಾಲಿಗೆ ಚುಚ್ಚಲಾಗಿತ್ತು. ಛತ್ರಿಯ ಮೊನೆಗೆ ಸವರಲಾದ ಪ್ರಾಣಾಂತಿಕ ವಿಷದಿಂದ ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪಿದ್ದರು.
ಈ ಕೊಲೆಯ ಹಿಂದೆ ಆಗಿನ ಸೋವಿಯತ್ ರಷ್ಯಾ ಮತ್ತು ಬಲ್ಗೇರಿಯಾದ ಗುಪ್ತಚರ ಸಂಘಟನೆಗಳ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.
1971 ರಲ್ಲಿ ರಷ್ಯಾದ ಬಂಡಾಯ ಸಾಹಿತಿ ಅಲೆಕ್ಸಾಂಡರ್ ಸಾಲೆನಿಟ್ಸಿನ್ ಎಂಬುವರನ್ನು ಕೊಲ್ಲಲು ವಿಫಲ ಯತ್ನ ನಡೆದಿತ್ತು. ಟೀ ಕುಡಿಯುವ ವೇಳೆ ಅದರಲ್ಲಿ ವಿಷ ಬೆರೆಸುವ ಅಪಾಯದಿಂದ ಸ್ವಲ್ಪದರಲ್ಲೇ ಇವರು ಪಾರಾಗಿದ್ದರು. ನಂತರ ಇವರು ರಷ್ಯಾ ದೇಶವನ್ನೇ ತೊರೆದು ಅಮೆರಿಕದಲ್ಲಿ ರಾಜಾಶ್ರಯ ಪಡೆದಿದ್ದು ಬೇರೆ ಮಾತು..!
ಇತ್ತೀಚಿನ ಕೆಲ ವಿಷಪ್ರಾಶನ ಯತ್ನದ ಘಟನೆಗಳು
ಅಲೆಕ್ಸಾಂಡರ್ ಲಿತ್ವಿನೆಂಕೊ: ಒಂದು ಕಾಲದಲ್ಲಿ ರಷ್ಯಾದ ಎಫ್ಎಸ್ಬಿ ಸೆಕ್ಯೂರಿಟಿ ಸರ್ವಿಸ್ನ ಏಜೆಂಟ್ರಾಗಿದ್ದ ಲಿತ್ವಿನೆಂಕೊ, ಸರ್ಕಾರಿ ಪ್ರಾಯೋಜಿತ ಕೊಲೆಗಳ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದರು. ಇದರ ನಂತರ ಸರ್ಕಾರದ ಕಿರುಕುಳ ತಾಳದೆ ದೇಶ ಬಿಟ್ಟು ಬ್ರಿಟನ್ಗೆ ಪಲಾಯನಗೈದಿದ್ದರು. ಆದರೆ ಅಲ್ಲಿಗೂ ಬೆನ್ನಟ್ಟಿದ ರಷ್ಯಾ ಗುಪ್ತಚರ ವಿಭಾಗದ ಏಜೆಂಟರು ಇವರನ್ನು ವಿಷವಿಕ್ಕಿ ಕೊಲ್ಲಲು ಸಫಲರಾದರು. 2006 ರ ನವೆಂಬರ್ನಲ್ಲಿ ತೀವ್ರ ಅನಾರೋಗ್ಯಕ್ಕೀಡಾದ ಲಿತ್ವಿನೆಂಕೊ ಕೆಲ ವಾರಗಳ ನಂತರ ಮೃತಪಟ್ಟಿದ್ದರು. ಇವರು ಚಹಾ ಕುಡಿದ ಕಪ್ ಒಂದರಲ್ಲಿ ಅತಿ ಪ್ರಬಲವಾದ ಪೊಲೋನಿಯಂ ಎಂಬ ವಿಷ ಪತ್ತೆಯಾಗಿತ್ತು ಎಂದು ತನಿಖಾ ಸಂಸ್ಥೆಗಳು ನಂತರ ಬಹಿರಂಗ ಪಡಿಸಿದವು.
ಅನ್ನಾ ಪೊಲಿಟ್ಕೊವ್ಸಕಾಯಾ: ಚೆಚನ್ಯಾ ಯುದ್ಧದ ಸಂದರ್ಭದಲ್ಲಿ ರಷ್ಯಾ ನಡೆಸಿದ ಅಮಾನವೀಯ ಕ್ರೌರ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಾಯೋಜಿತ ಕೊಲೆಗಳ ಬಗ್ಗೆ ಪತ್ರಕರ್ತೆಯಾಗಿದ್ದ ಅನ್ನಾ ಸಾಕಷ್ಟು ವರದಿಗಳನ್ನು ಬರೆದು ಪ್ರಕಟಿಸಿದ್ದರು. ಇದರಿಂದ ಸಹಜವಾಗಿಯೇ ಅಧ್ಯಕ್ಷ ಪುಟಿನ್ ಅವರ ಕಣ್ಣು ಕೆಂಪಗಾಗಿದ್ದವು. 2006 ರಲ್ಲಿ ಅಪಾರ್ಟಮೆಂಟ್ ಒಂದರ ಲಿಫ್ಟ್ನಲ್ಲಿ ಇವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದಕ್ಕೂ ಮುನ್ನ ಇವರನ್ನು ವಿಷವಿಕ್ಕಿ ಸಾಯಿಸುವ ಪ್ರಯತ್ನಗಳು ವಿಫಲವಾಗಿದ್ದವು.
ವ್ಲಾಡಿಮಿರ್ ಕಾರಾ-ಮುರ್ಜಾ: ಕಾರಾ-ಮುರ್ಜಾ ಮೂಲತಃ ಓರ್ವ ಪತ್ರಕರ್ತರಾಗಿದ್ದು, ನಂತರ ರಾಜಕೀಯಕ್ಕೆ ಬಂದು ಪ್ರಮುಖ ಪ್ರತಿಪಕ್ಷ ನಾಯಕನಾಗಿ ಬೆಳೆದಿದ್ದರು. 2015ರ ಮೇ ತಿಂಗಳಲ್ಲಿ ಇವರು ಮಾಸ್ಕೊನಲ್ಲಿ ಹಠಾತ್ತಾಗಿ ತೀವ್ರ ಅನಾರೋಗ್ಯಕ್ಕೀಡಾದರು. ಕೆಲ ದಿನಗಳ ಕಾಲ ಕೋಮಾದಲ್ಲಿದ್ದ ಇವರು ನಂತರ ಚೇತರಿಸಿಕೊಂಡಿದ್ದರು. ಇವರ ಅನಾರೋಗ್ಯಕ್ಕೆ ಯಾವುದೋ ವಿಷವೇ ಕಾರಣ ಎಂಬುದನ್ನು ವೈದ್ಯರು ಹೇಳಿದರಾದರೂ, ಇವರ ದೇಹ ಸೇರಿದ ವಿಷ ಯಾವುದು ಎಂಬುದನ್ನು ಮಾತ್ರ ಪತ್ತೆ ಮಾಡಲಾಗಲಿಲ್ಲ. 2017 ರ ಫೆಬ್ರವರಿಯಲ್ಲಿ ಮತ್ತೆ ಅದೇ ರೀತಿಯ ಅನಾರೋಗ್ಯಕ್ಕೀಡಾದ ಕಾರಾ-ಮುರ್ಜಾ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಕೋಮಾ ಸ್ಥಿತಿಗೆ ಜಾರಿದರು. ಆದರೆ ಈ ಬಾರಿಯೂ ಅವರು ಬದುಕುಳಿದದ್ದು ಮಾತ್ರ ಆಶ್ಚರ್ಯ. ಇವರಿಗೆ ವಿಷಪ್ರಾಶನ ಮಾಡಿ ಕೊಲೆ ಯತ್ನ ಮಾಡಲಾಗಿದೆ ಎಂದು ಇವರ ವಕೀಲರು ಕ್ರಿಮಿನಲ್ ಕೇಸ್ ದಾಖಲಿಸಲು ಪ್ರಯತ್ನಿಸಿದರಾದರೂ ಅದು ಕೈಗೂಡಲಿಲ್ಲ.
ಸೆರ್ಗೆ ಕ್ರಿಪಲ್: ಒಂದು ಕಾಲದಲ್ಲಿ ಸರ್ಕಾರಿ ಗೂಢಚಾರನಾಗಿದ್ದ ಇವರನ್ನು, ಡಬಲ್ ಏಜೆಂಟ್ ಆಗಿರುವ ಸಂಶಯದ ಮೇಲೆ ರಷ್ಯಾದ ಮನೆಯೊಂದರಲ್ಲಿ ಬಂಧಿಸಿ ಇಡಲಾಗಿತ್ತು. ಆದರೆ ಕೈದಿಗಳ ವಿನಿಮಯ ಒಪ್ಪಂದ ಜಾರಿಯ ಸಮಯದಲ್ಲಿ ಇವರು ರಷ್ಯಾದಿಂದ ಪಾರಾಗಿ ಬ್ರಿಟನ್ ಸೇರಿಕೊಂಡರು. ಇದರ ನಂತರ ಲಂಡನ್ನ ಸ್ಯಾಲಿಸ್ಬರಿ ಪಟ್ಟಣದಲ್ಲಿ ಇವರು ತಮ್ಮ ಪಾಡಿಗೆ ತಾವು ಬದುಕು ಕಳೆಯಲಾರಂಭಿಸಿದರು. ಆದರೆ ತಮ್ಮ ಹಳೆಯ ಹೆಸರನ್ನೇ ಅಲ್ಲೂ ಮುಂದುವರಿಸಿದ್ದು ಬಹುಶಃ ಇವರಿಗೆ ಮುಳುವಾಯಿತು ಎನ್ನಲಾಗಿದೆ. ಒಂದು ಕಾಲದಲ್ಲಿ ಸರ್ಕಾರಿ ಗೂಢಚಾರನಾಗಿ ಕೆಲಸ ಮಾಡಿದವನನ್ನು, ಸ್ವತಃ ಗೂಢಚಾರಿಯಾಗಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಸುಮ್ಮನೆ ಬಿಡುವುದು ಸಾಧ್ಯವಿರಲಿಲ್ಲ. 2018 ರಲ್ಲಿ ಕ್ರಿಪಲ್ ಹಾಗೂ ಆತನ ಮಗಳಿಗೆ ಗೊತ್ತಾಗದಂತೆ ವಿಷಪ್ರಾಷನ ಮಾಡಿಸಿ ಕೊಲೆ ಯತ್ನ ಮಾಡಲಾಯಿತು. ಬಹುತೇಕ ಸಾವಿನಂಚಿಗೆ ಬಂದಿದ್ದ ತಂದೆ ಮಗಳು ಅದು ಹೇಗೋ ಬದುಕುಳಿದರು. ಇವರ ಕೊಲೆ ಯತ್ನದ ಹಿಂದೆ ರಷ್ಯಾ ಗೂಢಚಾರರ ಕೈವಾಡ ಇತ್ತು ಎಂಬುದನ್ನು ಬ್ರಿಟಿಷ್ ತನಿಖಾಧಿಕಾರಿಗಳು ಪತ್ತೆ ಮಾಡಿದ್ದರು.
ಅಲೆಕ್ಸಾಂಡರ್ ಪೆರೆಪಿಲಿಚ್ನಿ: ರಷ್ಯಾದಲ್ಲಿ ಖ್ಯಾತ ಉದ್ಯಮಿಯಾಗಿದ್ದ ಪೆರೆಪಿಲಿಚ್ನಿ 2012 ರಲ್ಲಿ ಹಠಾತ್ತಾಗಿ ಸಾವಿಗೀಡಾದರು. ಬೆಳಗ್ಗೆ ಜಾಗಿಂಗ್ ಹೋಗುವ ಮುನ್ನ ಕುಡಿದ ಒಂದು ಕಪ್ ಸೂಪ್ ಇವರ ಪ್ರಾಣ ತೆಗೆದುಕೊಂಡಿತ್ತು. ಅತಿ ಘಾತಕವಾದ ಗ್ಯಾಲ್ಸೆಮಿಯಂ ಎಂಬ ವಿಷವನ್ನು ಇವರು ಕುಡಿದ ಸೂಪ್ನಲ್ಲಿ ಬೆರೆಸಲಾಗಿತ್ತು ಎಂದು ಹೇಳಲಾಗಿತ್ತು.
ವಿಷಪಾತಕದ ಜಾಗತಿಕ ಇತಿಹಾಸದ ಪ್ರಮುಖ ಘಟನೆಗಳು
ಕ್ರಿಸ್ತಪೂರ್ವ 399: ಭ್ರಷ್ಟಾಚಾರ ಹಾಗೂ ರಾಜದ್ರೋಹದ ಆರೋಪದ ಮೇಲೆ ಆಗಿನ ಕಾಲದ ಖ್ಯಾತ ತತ್ವಜ್ಞಾನಿ ಸಾಕ್ರೆಟಿಸ್ ಅವರಿಗೆ ಬಲವಂತವಾಗಿ ಹೆಮ್ಲಾಕ್ ಎಂಬ ವಿಷವನ್ನು ಕುಡಿಸಲಾಗಿತ್ತು.
ಕ್ರಿಸ್ತಪೂರ್ವ 60: ಪೊಂಟಸ್ ದೇಶದ ರಾಜ ಕಿಂಗ್ ಮಿತ್ರಿಡೇಟ್ಸ್-6 ಎಂಬಾತ ವಿಷಪ್ರಾಶನದಿಂದ ಪಾರಾಗಲು ವಿಚಿತ್ರ ಪದ್ಧತಿಯನ್ನು ಅಳವಡಿಸಿಕೊಂಡಿದ್ದ. ಈತ ಪ್ರತಿದಿನ ಒಂಚೂರು ವಿಷವನ್ನು ತನ್ನ ದೇಹಕ್ಕೆ ಚುಚ್ಚಿಕೊಳ್ಳುತ್ತಿದ್ದ. ಅದರಿಂದ ದೇಹದಲ್ಲಿ ವಿಷದ ವಿರುದ್ಧ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದ. ಹೀಗೆ ಪ್ರತಿದಿನ ವಿಷ ಪ್ರಾಶನ ಮಾಡುವ ಪ್ರಕ್ರಿಯೆಯು ಮಿತ್ರಿಡೇಟಿಸಂ ಎಂದೇ ಕರೆಯಲ್ಪಟ್ಟಿದೆ.
ಇಸ್ವಿ 1950; ಲುಕ್ರೆಜಿಯಾ ಬೊರ್ಗಿಯಾ ಎಂಬಾಕೆ ತನ್ನ ಎರಡನೇ ಗಂಡನನ್ನು ಕ್ಯಾಂಟಾರೆಲ್ಲಾ ಎಂಬ ವಿಷ ನೀಡಿ ಕೊಲೆ ಮಾಡಿದಳು ಎಂದು ಆರೋಪಿಸಲಾಗಿತ್ತು. ಕೈಬೆರಳಲ್ಲಿ ಧರಿಸುವ ಉಂಗುರದಲ್ಲಿ ವಿಷದ ಪುಡಿಯನ್ನು ಇಟ್ಟುಕೊಳ್ಳುವುದರಲ್ಲಿ ಈಕೆ ನಿಷ್ಣಾತಳಾಗಿದ್ದಳು ಎನ್ನಲಾಗಿದೆ.