ಗೋಪಾಲ್ಗಂಜ್ (ಬಾಂಗ್ಲಾದೇಶ): ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗೋಪಾಲ್ಗಂಜ್ನಲ್ಲಿರುವ ದಿ. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ.
ಬಾಂಗ್ಲಾ ಪಿತಾಮಹ ಬಂಗಬಂಧು ಸಮಾಧಿಗೆ ಬಂದ ಪಿಎಂ ಮೋದಿ ಅವರನ್ನು ಬಾಂಗ್ಲಾದೇಶ ಪ್ರಧಾನಿ ಹಾಗೂ ಬಂಗಬಂಧು ಅವರ ಪುತ್ರಿಯಾಗಿರುವ ಶೇಖ್ ಹಸೀನಾ ಬರಮಾಡಿಕೊಂಡರು. ಬಂಗಬಂಧು ಅವರ ಸ್ಮಾರಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಣ್ಯವ್ಯಕ್ತಿ ಮೋದಿಯಾಗಿದ್ದಾರೆ.
ಇದಕ್ಕೂ ಮುನ್ನ ಈಶ್ವರಿಪುರದ ಜೆಶೋರೇಶ್ವರಿ ಕಾಳಿ ದೇವಸ್ಥಾನ ಹಾಗೂ ಕಾಶಿಯಾನದಲ್ಲಿರುವ ಒರಕಂಡಿ ದೇಗುಲಕ್ಕೆ ಭೇಟಿ ನೀಡಿದ್ದ ಮೋದಿ ವಿಶೇಷ ಪ್ರಾರ್ಥನೆ-ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ಕಾಳಿ ದೇಗುಲದಲ್ಲಿ ಮೋದಿ ವಿಶೇಷ ಪೂಜೆ: ಕೋವಿಡ್ನಿಂದ ಮುಕ್ತಿಗೆ ಪ್ರಾರ್ಥನೆ
ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಂಡ ಬಳಿಕ ಪ್ರಧಾನಿ ಮೋದಿ ಅವರ ಮೊದಲ ವಿದೇಶ ಭೇಟಿ ಇದಾಗಿದೆ. ಬಾಂಗ್ಲಾ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಮೋದಿ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ.
ಮೊನ್ನೆಯಷ್ಟೇ 2020ರ ಸಾಲಿನ 'ಗಾಂಧಿ ಶಾಂತಿ ಪ್ರಶಸ್ತಿ'ಗೆ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರನ್ನು ಭಾರತ ಸರ್ಕಾರ ಆಯ್ಕೆ ಮಾಡಿತ್ತು.