ಇಸ್ಲಾಮಾಬಾದ್: ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಯುದ್ಧ ಮಾಡಲು ಸನ್ನದ್ಧವಾಗಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕ್ ಸಹ ಭಾರತಕ್ಕೆ ಪ್ರತ್ಯುತ್ತರ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಆದರೆ ತಾನಾಗಿಯೇ ಯುದ್ಧ ಮಾಡುವುದಿಲ್ಲ ಎಂದಿರುವ ಪಾಕ್, ತನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ವಾರ್ನಿಂಗ್ ಕೊಟ್ಟಿದೆ.
ಪಾಕ್ ಸೇನೆಯ ಐಎಸ್ಪಿಆರ್ನ ಮಹಾನಿರ್ದೇಶಕ ಮೇಜರ್ ಜನರಲ್ ಆಸಿಫ್ ಘಫೂರ್ ಈ ಬಗ್ಗೆ ಮಾತನಾಡಿ, ಒಂದು ವೇಳೆ ಭಾರತದಿಂದಲೇ ಯುದ್ಧದ ಬೆದರಿಕೆ ಬಂದರೆ ನಾವು ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.
ನಾವು ಯುದ್ಧಕ್ಕೆ ತಯಾರಾಗುತ್ತಿಲ್ಲ. ನೀವೇ (ಭಾರತ) ಯುದ್ಧದ ಬೆದರಿಕೆಯೊಡ್ಡುತ್ತಿದ್ದೀರಿ. ನಾವಾಗಿಯೇ ಯುದ್ಧ ಮಾಡುವುದಿಲ್ಲ. ಆದರೆ ನಿಮ್ಮಿಂದ ಯುದ್ಧದ ಬೆದರಿಕೆ ಹೆಚ್ಚಾದರೆ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುವುದು ನಮ್ಮ ಹಕ್ಕು ಎಂದಿದ್ದಾರೆ.
ಬೇಹುಗಾರಿಕೆ ಆರೋಪದ ಮೇಲೆ ಪಾಕ್ನ ಇಬ್ಬರು ಸೇನಾಧಿಕಾರಿಗಳನ್ನು ಮಿಲಿಟರಿ ಕಸ್ಟಡಿಯಲ್ಲಿ ಇರಿಸಲಾಗಿದೆ. ಸೇನಾ ಮುಖ್ಯಸ್ಥರು ಅವರ ಮೇಲೆ ಕೋರ್ಟ್ ಮಾರ್ಷಲ್ಗೂ ಆದೇಶ ನೀಡಿದ್ದಾರೆ. ಇಬ್ಬರದೂ ಪ್ರತ್ಯೇಕ ಕೇಸ್ಗಳಿವೆ. ಆದರೆ ಎರಡಕ್ಕೂ ಪರಸ್ಪರ ಸಂಬಂಧವಿಲ್ಲ ಎಂದು ಹೇಳಿದರು.