ಢಾಕಾ (ಬಾಂಗ್ಲಾದೇಶ): ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಹಾಜಿಗಂಜ್ನಲ್ಲಿ ದುರ್ಗಾ ಪೂಜೆ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವುದಾಗಿ ಜಮಾತ್-ಇ-ಇಸ್ಲಾಮಿ ನಾಯಕ ಕಮಲುದ್ದೀನ್ ಅಬ್ಬಾಸಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಅಕ್ಟೋಬರ್ 13ರಂದು ಚಾಂದ್ಪುರದ ಹಾಜಿಗಂಜ್ನ ಲಕ್ಷ್ಮೀ ನಾರಾಯಣ ಅಖ್ರಾ ದೇವಸ್ಥಾನದ ಬಳಿ ದುರ್ಗಾ ಪೂಜೆ ಮಂಟಪದ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ದಾಳಿಕೋರರಿಂದ ಹಿಂಸಾಚಾರ ಉಂಟಾಗಿತ್ತು. ಘಟನೆಯಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಬ್ಬಾಸಿ ಹಿಂಸಾಚಾರದ ನೇತೃತ್ವ ವಹಿಸಿದ್ದು ಕಂಡುಬಂದಿತ್ತು.
ಇದನ್ನೂ ಓದಿ: ಬಾಂಗ್ಲಾದೇಶ ಹಿಂಸಾಚಾರ: ದುರ್ಗಾ ಪೆಂಡಲ್ನಲ್ಲಿ ಕುರಾನ್ ಪ್ರತಿ ಇಟ್ಟಿದ್ದ ಆರೋಪಿ ಅರೆಸ್ಟ್
ಈತನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆರೋಪಿ ಕಮಲುದ್ದೀನ್ ಅಬ್ಬಾಸಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಹೆಸರನ್ನ ಕೂಡ ಬಹಿರಂಗಪಡಿಸಿದ್ದಾನೆ ಎಂದು ಚಾಂದ್ಪುರ ಪೊಲೀಸ್ ವರಿಷ್ಠಾಧಿಕಾರಿ ಮಿಲನ್ ಮಹ್ಮದ್ ಹೇಳಿದ್ದಾರೆ.
ಹಾಜಿಗಂಜ್ನಲ್ಲಿ ಮಾತ್ರವಲ್ಲ ಬಾಂಗ್ಲಾದೇಶದ ಹಲವೆಡೆ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದ್ದು, 10 ಪ್ರಕರಣಗಳ ಪೈಕಿ ಸುಮಾರು 5,000 ಅಪರಿಚಿತ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ. ಇವರಲ್ಲಿ 29 ಜನರನ್ನು ಪೊಲೀಸರು ಬಂಧಿಸಿದ್ದು, ಇತರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ: 5ಕ್ಕೆ ಏರಿದ ಸಾವಿನ ಸಂಖ್ಯೆ