ಕಾಬೂಲ್ (ಅಫ್ಘಾನಿಸ್ತಾನ್): ಆಫ್ಘನ್ನಲ್ಲಿ ತಾಲಿಬಾನಿಗಳು ಹಿಂಸಾತ್ಮಕ ಕೃತ್ಯ ಎಸಗುತ್ತಿರುವುದು ಒಂದೆಡೆಯಾದರೆ. ಆಂತರಿಕವಾಗಿ ಸರ್ಕಾರ ರಚನೆಯ ಕಚ್ಚಾಟಗಳು ಹೆಚ್ಚಾಗುತ್ತಿವೆ. ತಾಲಿಬಾನ್ ನಾಯಕತ್ವದ ಸರ್ಕಾರ ರಚನೆಯಲ್ಲಿ ವಾಸ್ತವವಾದಿಗಳು ಮತ್ತು ವಿಚಾರವಾದಿಗಳ ನಡುವಿನ ವೈಷಮ್ಯ ಇದೀಗ ಮತ್ತಷ್ಟು ಉಲ್ಬಣಗೊಂಡಿದೆ. ಈ ನಡುವೆ ಸಂಪುಟ ರಚನೆಯಾದ ಹಿನ್ನೆಲೆ ಅಧಿಕಾರಕ್ಕಾಗಿ ಈ ಎರಡು ವರ್ಗಗಳಲ್ಲಿ ಒಳ ಸಂಘರ್ಷ ಏರ್ಪಟ್ಟಿದೆ.
ಸಂಪುಟದಲ್ಲಿ ಸ್ಥಾನಗಿಟ್ಟಿಸುವ ಹಂಬಲದಿಂದ ಎರಡು ಗುಂಪುಗಳ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗ್ತಿದೆ. ಈ ಗಲಾಟೆಯಲ್ಲಿ ತಾಲಿಬಾನ್ ಸಹ - ಸಂಸ್ಥಾಪಕ ಹಾಗೂ ಅಲ್ಲಿನ ಉಪ ಪ್ರಧಾನಿಯಾಗಿರುವ ಅಬ್ದುಲ್ ಘನಿ ಬರದಾರ್ ಸಾವನ್ನಪ್ಪಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಆದರೆ, ಈ ವದಂತಿಯನ್ನ ಖುದ್ದು ಬರದಾರ್ ಅವರೇ ತಮ್ಮ ಕೈ ಬರಹದ ಮೂಲಕ ಮತ್ತು ಆಡಿಯೋ ಸಂದೇಶ ಕಳುಹಿಸುವ ಮೂಲಕ ಅಲ್ಲಗಳೆದಿದ್ದರು. ತಾಲಬಾನ್ ಮತ್ತು ಅಮೆರಿಕ ನಡುವಿನ ಮಾತುಕತೆಯ ಸಮಯದಲ್ಲಿ ಮುಖ್ಯ ಸಂಧಾನಕಾರರಾಗಿ ನೇಮಕವಾಗಿದ್ದ ಬರದಾರ್ ಅವರ ಕಚೇರಿಯಿಂದ ಪಾಷ್ಟೋ ಭಾಷೆಯ ಪತ್ರ ಪ್ರಕಟಿಸಲಾಗಿತ್ತು.
ಕಾಬೂಲ್ ವಶಕ್ಕೆ ಪಡೆದ ಬಳಿಕ ಬರದಾರ್ ಸರ್ಕಾರ ರಚನೆಯ ಎಲ್ಲ ಸಾಧ್ಯತೆಯನ್ನ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ತಾಲಿಬಾನ್ ನಾಯಕ ಎನಿಸಿದ್ದರು. ಆದರೆ, ಕಳೆದ ವಾರ ತಾಲಿಬಾನ್ನ ಇತರ ಪ್ರಮುಖರು ಸರ್ಕಾರ ರಚನೆಯ ಮೇಲೆ ಹಿಡಿತ ಸಾಧಿಸಿ ಬರದಾರ್ ಸರ್ಕಾರ ರಚನೆಯಲ್ಲಿ ವಿಫಲರಾಗಿದ್ದರು.
ಇತ್ತ ತಾಲಿಬಾನ್ ಸಂಪುಟದಲ್ಲೂ ಅಸಮಾಧಾನ ಜೋರಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಂಪುಟದಿಂದ ಹೊರನಡೆದಿದ್ದಾರೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ಆದರೆ, ಈ ಸುದ್ದಿಯನ್ನ ತಾಲಿಬಾನ್ ವಕ್ತಾರರು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ನಾನು ಸತ್ತಿಲ್ಲ, ಬದುಕಿದ್ದೇನೆ, ತಾಲಿಬಾನ್ ಸಹ ಸಂಸ್ಥಾಪಕನ ಆಡಿಯೋ ಕ್ಲಿಪ್ ರಿಲೀಸ್!