ಬೀಜಿಂಗ್ : ಚೀನಾ ಈ ವರ್ಷದ ಜುಲೈ ತಿಂಗಳ ಮೊದಲ ವಾರದಲ್ಲಿ ಅರುಣಾಚಲ ಪ್ರದೇಶದ ಭಾರತದ ಗಡಿ ಸಮೀಪದಲ್ಲಿರುವ ಟಿಬೆಟ್‌ಗೆ ಬುಲೆಟ್ ರೈಲುಗಳನ್ನು ಓಡಿಸಲಿದೆ. ದೇಶದ ಎಲ್ಲಾ ಮುಖ್ಯ ಭೂಪ್ರದೇಶದ ಪ್ರಾಂತೀಯ ಮಟ್ಟದ ಪ್ರದೇಶಗಳಿಗೆ ಹೈಸ್ಪೀಡ್ ರೈಲು ಸೇವೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಬೆಟ್‌ನ ಪ್ರಾದೇಶಿಕ ರಾಜಧಾನಿ ಲಾಸಾದವರೆಗೆ 435 ಕಿ.ಮೀ ದೂರದ ರೈಲು ಸಂಪರ್ಕವು ಆಂತರಿಕ ದಹನ ಮತ್ತು ವಿದ್ಯುತ್ ಎರಡರಿಂದ ಕೂಡಿದ ಫಕ್ಸಿಂಗ್ ಹೈಸ್ಪೀಡ್ ರೈಲುಗಳು ಓಡಾಡಲಿವೆ. ಈ ವಿಚಾರವನ್ನು ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಲಿಮಿಟೆಡ್‌ನ ಮಂಡಳಿಯ ಅಧ್ಯಕ್ಷ ಲು ಡಾಂಗ್‌ಫು ತಿಳಿಸಿದ್ದಾರೆ.
ಪೂರ್ವ ಟಿಬೆಟ್‌ನ ಲಾಸಾವನ್ನು ನೈಂಗ್‌ಚಿಯೊಂದಿಗೆ ಸಂಪರ್ಕಿಸುವ ರೈಲ್ವೆ ಮಾರ್ಗದ ಕಾಮಗಾರಿಗೆ ಚೀನಾ 2014 ರಲ್ಲಿ ಚಾಲನೆ ನೀಡಿತ್ತು. ಇದು ಟಿಬೆಟ್‌ನ ಮೊದಲ ವಿದ್ಯುದ್ದೀಕೃತ ರೈಲು ಮಾರ್ಗವಾಗಿದ್ದು, ಜೂನ್ 2021 ರಿಂದ ರೈಲು ಸಂಚಾರ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಇ-ಸಿಗರೆಟ್ ಬಗ್ಗೆ WHO ನಿಲುವು ವಿನಾಶಕಾರಿ: ನ್ಯಾನ್ಸಿ ಲೌಕಾಸ್
2020 ರ ಅಂತ್ಯಕ್ಕೆ ಈ ರೈಲು ಮಾರ್ಗಕ್ಕೆ ಟ್ರ್ಯಾಕ್ ಹಾಕುವ ಕೆಲಸ ಪೂರ್ಣಗೊಂಡಿದೆ ಎಂದು ವರದಿ ತಿಳಿಸಿದೆ. ಚೀನಾದ ರೈಲ್ವೆ ಸಮೂಹದ ಅಂಗಸಂಸ್ಥೆಯಾದ ಟಿಬೆಟ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಪ್ರಕಾರ, ಇಲ್ಲಿ ಓಡಾಡುವ ರೈಲು ಗಂಟೆಗೆ 160 ಕಿ.ಮೀ ವೇಗ ಹೊಂದಿದೆ.
ಚೀನಾ 2025 ರ ವೇಳೆಗೆ ಸುಮಾರು 50,000 ಕಿ.ಮೀ. ಹೈಸ್ಪೀಡ್ ರೈಲು ಓಡಾಟ ವಿಸ್ತರಿಸುವ ಗುರಿ ಹೊಂದಿದೆ. ಸದ್ಯ 2020ರ ವೇಳೆಗೆ 37,900 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ.